ಮುಂಬೈ: ಕೃತಕ ಬುದ್ಧಿಮತ್ತೆ (ಎಐ) ಜಗತ್ತನ್ನು ಸಮಸ್ಯೆಗೆ ದೂಡಲಿದೆ ಎಂಬ ಅಂಶವನ್ನು ಯಾರೂ ನಿರ್ಲಕ್ಷಿಸಲಾಗುವುದಿಲ್ಲ. ತಂತ್ರಜ್ಞಾನವನ್ನು ಉತ್ತಮ ಕೆಲಸಕ್ಕೆ ಬಳಸಿಕೊಳ್ಳಬೇಕು ಎಂದು ಸೂಪರ್ ಸ್ಟಾರ್ ಅಮೀರ್ ಖಾನ್ ಶುಕ್ರವಾರ ತಿಳಿಸಿದ್ದಾರೆ.
ನಾವು ಹೊಸ ರೀತಿಯ ತಂತ್ರಜ್ಞಾನವನ್ನು ಗಮನಿಸೋದನ್ನು ಮುಂದುವರಿಸುತ್ತೇವೆ. ವಿಶ್ವದಲ್ಲೀಗ ಎಐ ಬಿರುಗಾಳಿ ಬೀಸಲು ಆರಂಭಿಸಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ತಂತ್ರಜ್ಞಾನದ ವಿಷಯದಲ್ಲಿ ನಾನು ಹಿಂದೆ ಇದ್ದೇನೆ. ನನ್ನ ಜೀವನ ತಂತ್ರಜ್ಞಾನದ ಬದಲಾಗಿ ಕಥೆಗಳ ಸುತ್ತ ಸುತ್ತುತ್ತದೆ.
ತಂತ್ರಜ್ಞಾನದ ವಿಷಯದಲ್ಲಿ ಹಿಂದೆ ಸರಿಯಲು ಸಾಧ್ಯವಿಲ್ಲ. ಯಾವುದೇ ವೃತ್ತಿಯಾಗಿರಲಿ ಅಥವಾ ಉದ್ಯಮವಾಗಿರಲಿ ಹೊಸ ತಂತ್ರಜ್ಞಾನಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಅದನ್ನು ಸ್ಥಗಿತಗೊಳಿಸುವ ಅಗತ್ಯವೂ ಇಲ್ಲ. ಆದರೆ ನೀವು ಅದರೊಂದಿಗೆ ವಿಕಸನಗೊಳ್ಳಲು ಕಲಿಯಬೇಕು ಎಂದು ನಟ ಎಬಿಪಿ ಐಡಿಯಾಸ್ ಆಫ್ ಇಂಡಿಯಾ ಶೃಂಗಸಭೆ 3.0ರ ಮೊದಲ ದಿನದ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದರು.
ನಟ ಅಮೀರ್ ಖಾನ್ ಅವರ ಮಾಜಿ ಪತ್ನಿ, ನಿರ್ದೇಶಕಿ ಕಿರಣ್ ರಾವ್ ಅವರು ತಮ್ಮ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಲಾಪತಾ ಲೇಡಿಸ್'ನ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸೂಪರ್ ಸ್ಟಾರ್ ಅಮೀರ್ ಜೊತೆಗೂಡಿ ದೇಶಾದ್ಯಂತ ಪ್ರಚಾರ ಮಾಡುತ್ತಿದ್ದು, 'ಟೆಲ್ಲಿಂಗ್ ಲಾಪತಾ ಟೇಲ್ಸ್' ಎಂಬ ಅಧಿವೇಶನದ ಭಾಗವಾಗಿದ್ದರು. ಆ ಸಂದರ್ಭ ಕಿರಣ್ ರಾವ್ ಅವರೂ ಕೂಡ ಅಮೀರ್ ಅವರಂತೆಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತಂತ್ರಜ್ಞಾನವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.