ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11'ರ ಈ ಅವಧಿಯಲ್ಲಿ ಧನರಾಜ್ ಆಚಾರ್ ಮತ್ತು ರಜತ್ ಕಿಶನ್ ಅವರ ಜಗಳ ತಾರಕಕ್ಕೇರಿದೆ. ಮೊನ್ನೆಯಷ್ಟೇ ಮಾತಿಗೆ ಮಾತು ಬೆಳೆದಿತ್ತು. ಸಂಭಾವ್ಯ ಅನಾಹುತವನ್ನು ಮನೆಯ ಇತರೆ ಸ್ಪರ್ಧಿಗಳು ತಡೆದು, ಪರಿಸ್ಥಿತಿಯನ್ನು ನಿಭಾಯಿಸಿದ್ದರು.
ಆದರೆ ಇಂದು ದೊಡ್ಡ ಜಗಳ ನಡೆದೇ ಬಿಟ್ಟಿದೆ. ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಅವರು ತಾಳ್ಮೆ ಕಳೆದುಕೊಂಡಿದ್ದಾರೆ. ಧನರಾಜ್ ಆಚಾರ್ ಮೈಮೇಲೆ ಎಗರಿದ್ದು, ಪರಿಸ್ಥಿತಿ ಮತ್ತಷ್ಟು ತಾರಕಕ್ಕೇರಿದೆ. ರಜತ್ ಹೊಡೆಯಲು ಹೋಗಿದ್ದಾರೆ, ಪರಿಸ್ಥಿತಿ ನಿಭಾಯಿಸಲು ಮನೆಯವರು ಹರಸಾಹಸ ಪಟ್ಟಿದ್ದಾರೆ. ಒಂದೆರಡು ಪೆಟ್ಟು ಬಿದ್ದಂತೆ ತೋರಿದ್ದು, ಸಂಪೂರ್ಣ ಸಂಚಿಕೆ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ.
ಈಗಾಗಲೇ ಹೊಡೆದಾಟಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಕನ್ನಡ ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಲಾಗಿದೆ. ಇಲ್ಲಿ ಹೊಡೆದಾಟಕ್ಕೆ ಅವಕಾಶವಿಲ್ಲ. ಇದು ಮನೆಯ ಮುಖ್ಯ ನಿಯಮಗಳಲ್ಲೊಂದು. ಸದ್ಯ ರಜತ್ ಕಿಶನ್ ಅವರ ಸರದಿ. ನಿಯಮ ಉಲ್ಲಂಘನೆ ಹಿನ್ನೆಲೆ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಅವರನ್ನು ಬಿಗ್ ಬಾಸ್ ಹೊರ ಕಳುಹಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ. ಕಿಚ್ಚನ ಪಂಚಾಯ್ತಿಯಲ್ಲಿ ಈ ವಿಷಯ ಚರ್ಚೆಗೆ ಬರೋದಂತೂ ಖಚಿತ ಎಂಬುದು ಪ್ರೇಕ್ಷಕರ ದೃಢ ವಿಶ್ವಾಸ. ಆದ್ರೆ ಮನೆಯಿಂದ ಹೊರ ಕಳುಹಿಸೋದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.