ಕನ್ನಡ ಚಿತ್ರರಂಗದ ಹೆಸರಾಂತ ನಟ ಡಾ. ಶಿವ ರಾಜ್‌ಕುಮಾರ್ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ. ನಿರ್ಮಾಪಕರ ಹಾಟ್ ಫೇವರಿಟ್ ಆಗಿರುವ ಮುತ್ತುರಾಜ ಕ್ಲಾಸ್, ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ. ಬಹುಶಃ ಡಾ. ರಾಜ್‌ಕುಮಾರ್ ಅವರನ್ನು ಹೊರತುಪಡಿಸಿದರೆ, ವಿವಿಧ ಪಾತ್ರಗಳನ್ನು ನಿರ್ವಹಿಸಿದ, ಹೊಸ ಪ್ರಯೋಗಗಳಿಗೂ ಒಗ್ಗಿಕೊಂಡ ಮತ್ತೋರ್ವ ನಟ ಅಂದರೆ ಅದು ಶಿವಣ್ಣ. ಇವರು ಸಿನಿಮಾ ವೃತ್ತಿಜೀವನ ಆರಂಭಿಸಿ 38 ವರ್ಷಗಳಾಗಿವೆ.
1986ರ ಫೆಬ್ರವರಿ 19ರಂದು, ಶಿವಣ್ಣ ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಂಡರು. 'ಆನಂದ್' ರೂಪದಲ್ಲಿ ಸಿನಿ ಅಖಾಡಕ್ಕಿಳಿದರು. ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದ 'ಆನಂದ್' ಚಿತ್ರವನ್ನು ಮಗನಿಗಾಗಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. ಆ ಕಾಲಕ್ಕೆ ಗಲ್ಲಾಪಟ್ಟಿಗೆಯಲ್ಲಿ ಸದ್ದು ಮಾಡಿದ್ದ 'ಆನಂದ್', ಕನ್ನಡಿಗರ ಆನಂದವನ್ನು ಇಮ್ಮಡಿಗೊಳಿಸಿತ್ತು. ಇನ್ನೂ, ಶಂಕರ್ ಗಣೇಶ್ ಸಂಗೀತ ಹಾಗೂ ಚಿ ಉದಯ ಶಂಕರ್ ಸಾಹಿತ್ಯದಲ್ಲಿ ಬಂದ ಹಾಡುಗಳು ಇಂದಿಗೂ ಜನಪ್ರಿಯ. ವಿಶೇಷವಾಗಿ ಟುವ್ವಿ..ಟುವ್ವಿ ಹಾಡು ಅಭಿಮಾನಿಗಳ ಮೆಚ್ಚಿನ ಸಾಂಗ್ಸ್ ಲಿಸ್ಟ್ನಲ್ಲಿದೆ.
ಆನಂದ್ ಚಿತ್ರದ ನಂತರ ಬಂದ ರಥಸಪ್ತಮಿ, ಮನ ಮೆಚ್ಚಿದ ಹುಡುಗಿ ಸಿನಿಮಾಗಳು ಶಿವಣ್ಣ ಅವರಿಗೆ 'ಹ್ಯಾಟ್ರಿಕ್ ಹೀರೋ' ಪಟ್ಟವನ್ನು ತಂದು ಕೊಟ್ಟವು. ಜನುಮದ ಜೋಡಿ, ನಮ್ಮೂರ ಮಂದಾರ ಹೂವೇ, ಓಂ, ಜೋಗಿ, ಎಕೆ47, ಕಡ್ಡಿಪುಡಿ, ಟಗರು, ಹೀಗೆ ಒಂದಾ - ಎರಡಾ ಅನೇಕ ಸಿನಿಮಾಗಳು ಶಿವಣ್ಣ ಅವರ ವರ್ಚಸ್ಸನ್ನು ಹೆಚ್ಚಿಸಿದವು. ಈ ನಾಲ್ಕು ದಶಕದಲ್ಲಿ ಸರಿಸುಮಾರು 125ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡು, ಪ್ರತಿಷ್ಟಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ವಿಶೇಷ ವಿಡಿಯೋ ಹಂಚಿಕೊಂಡಿರುವ ನಟ ಶಿವ ರಾಜ್‌ಕುಮಾರ್, ''38 ವರ್ಷಗಳ ಸುದೀರ್ಘ ಪಯಣದಲ್ಲಿ ಜೊತೆ ಇದ್ದವರಿಗೆಲ್ಲ ಧನ್ಯವಾದಗಳು. ನಿಮ್ಮ ಪ್ರೀತಿಗೆ ಚಿರಋಣಿ. ನಿಮ್ಮ ಶಿವು'' ಎಂದು ಬರೆದುಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.