ಮುಂಬೈ(ಮಹಾರಾಷ್ಟ್ರ):ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಬಂಧಿಸಲಾಗಿದ್ದ ಇಬ್ಬರು ಆರೋಪಿಗಳನ್ನು ಬುಧವಾರ ಇಲ್ಲಿನ ನ್ಯಾಯಾಲಯ ಮೇ. 27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಪ್ರಕರಣಗಳ ವಿಶೇಷ ನ್ಯಾಯಾಲಯ, ಮತ್ತೋರ್ವ ಆರೋಪಿ ಸೋನುಕುಮಾರ್ ಬಿಷ್ಣೋಯ್ ಎಂಬಾತನ ನ್ಯಾಯಾಂಗ ಬಂಧನವನ್ನು ಸಹ ಇದೇ ದಿನಾಂಕದವರೆಗೆ ವಿಸ್ತರಿಸಿತು. ಏಪ್ರಿಲ್ 14ರ ಮುಂಜಾನೆ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸದ ಸಮೀಪ ಹಲವು ಸುತ್ತು ಗುಂಡು ಹಾರಿಸಿದ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಎಂಬವರನ್ನು ಪೊಲೀಸ್ ಕಸ್ಟಡಿ ಮುಗಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗ, ಕಸ್ಟಡಿ ವಿಸ್ತರಣೆಗೆ ಮನವಿ ಮಾಡಲಿಲ್ಲ. ಆದರೆ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಎಲ್ಲಾ ಮೂವರು ಆರೋಪಿಗಳನ್ನು ನೆರೆಯ ನವಿ ಮುಂಬೈನ ತಲೋಜಾ ಜೈಲಿಗೆ ಕಳುಹಿಸಲು ನ್ಯಾಯಾಲಯವನ್ನು ಕೋರಿತು. ಇದಕ್ಕೆ ನ್ಯಾಯಾಧೀಶರು ಸಮ್ಮತಿಸಿದ್ದು, ಆರೋಪಿಗಳನ್ನು ಮೇ. 27ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾನನ್ನು ಗುಜರಾತ್‌ನಲ್ಲಿ ಬಂಧಿಸಿದರೆ, ಸೋನುಕುಮಾರ್ ಬಿಷ್ಣೋಯ್ ಮತ್ತು ಅನುಜ್ ಥಾಪನ್‌ನನ್ನು ಬಂದೂಕು ಪೂರೈಸಿದ ಆರೋಪದ ಮೇರೆಗೆ ಪಂಜಾಬ್‌ನಲ್ಲಿ ಬಂಧಿಸಲಾಗಿದೆ. ಈ ನಾಲ್ವರ ಪೈಕಿ ಥಾಪನ್ ಮೇ.1ರಂದು ಪೊಲೀಸ್ ಲಾಕಪ್‌ನ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರಕರಣದ ಐದನೇ ಆರೋಪಿ ಮೊಹಮ್ಮದ್ ರಫೀಕ್ ಚೌಧರಿ ರಾಜಸ್ಥಾನದಲ್ಲಿ ಬಂಧಿಸಲ್ಪಟ್ಟಿದ್ದು, ಮೇ.13ರವರೆಗೆ ಪೊಲೀಸ್ ಕಸ್ಟಡಿಯಲ್ಲಿರಲಿದ್ದಾನೆ.