ಅಮರಾವತಿ, ಆಂಧ್ರಪ್ರದೇಶ: ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಆಂಧ್ರಪ್ರದೇಶದ ಎನ್ಡಿಎ ಸರ್ಕಾರ ಗುರುವಾರ ರಾಜ್ಯ ವಿಧಾನ ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದೆ. ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯ (ವಿಎಸ್ಪಿ) ಕಾರ್ಪೊರೇಟ್ ಘಟಕವಾದ ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್ (ಆರ್ಐಎನ್ಎಲ್) ಅನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಇತರ ಸಚಿವರು ಸದನದಲ್ಲೀ ಹೇಳಿದರು.
ವಿಎಸ್ಪಿಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂಬ ಪ್ರತಿಪಕ್ಷ ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಆರೋಪಗಳನ್ನು ಇದೇ ಸಂದರ್ಭದಲ್ಲಿ ಸಚಿವರು ತಳ್ಳಿಹಾಕಿದರು.
ಪ್ರತಿಪಕ್ಷ ನಾಯಕರಿಗೆ ಸಚಿವರ ಪ್ರಶ್ನೆ:ವಿಎಸ್ಪಿಯ ಖಾಸಗೀಕರಣವನ್ನು ರಾಜ್ಯದ ಎನ್ಡಿಎ ಸರ್ಕಾರ ವಿರೋಧಿಸುತ್ತದೆ ಎಂದು ಪವನ್ ಕಲ್ಯಾಣ್, ಕೈಗಾರಿಕಾ ಸಚಿವ ಟಿ.ಜಿ. ಭರತ್ ಮತ್ತು ಕೃಷಿ ಸಚಿವ ಕೆ. ಅಚ್ಚನ್ನಾಯ್ಡು ಹೇಳಿದರು. ವಿಎಸ್ಪಿ ಖಾಸಗೀಕರಣಗೊಳಿಸುವುದನ್ನು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೇ ಸ್ಪಷ್ಟವಾಗಿ ನಿರಾಕರಿಸಿದ್ದು, ಈ ವಿಷಯದಲ್ಲಿ ಇದಕ್ಕಿಂತ ದೊಡ್ಡ ಸ್ಪಷ್ಟೀಕರಣ ಇನ್ನೇನು ಬೇಕು ಸಚಿವ ಭರತ್ ಪ್ರತಿಪಕ್ಷ ನಾಯಕರಿಗೆ ಪ್ರಶ್ನಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಉಕ್ಕು ಕಾರ್ಖಾನೆಯನ್ನು ಖಾಸಗೀಕರಣಗೊಳಿಸದಂತೆ ವಿನಂತಿಸಲಾಗಿದೆ ಎಂದು ಪವನ್ ಕಲ್ಯಾಣ್ ಸದನಕ್ಕೆ ತಿಳಿಸಿದರು. ವಿಎಸ್ಪಿಯ ಉದ್ದೇಶಿತ ಖಾಸಗೀಕರಣದ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು.