ನವದೆಹಲಿ: ಇತ್ತೀಚಗೆ ಗ್ರಾಮೀಣ ಭಾರತ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ.ಆರ್ಥಿಕವಾಗಿ ಸಬಲತೆ ಸಾಧಿಸುವತ್ತ ಹೆಜ್ಜೆಯನ್ನಿಡುತ್ತಿದೆ. ಆರ್ಥಿಕ ಚೇತರಿಕೆ ಹಿನ್ನೆಲೆಯಲ್ಲಿ ಕನಿಷ್ಠ ಒಬ್ಬ ಸದಸ್ಯರನ್ನು ಹೊಂದಿರುವ ಗ್ರಾಮೀಣ ಕುಟುಂಬಗಳು 2016-17 ನೇ ಸಾಲಿನಲ್ಲಿ ಶೇ 25.5 ರಷ್ಟು ವಿಮೆಯನ್ನು ಹೊಂದುತ್ತಿದ್ದರೆ, ಅದರ ಪ್ರಮಾಣ ಈಗ ಅಂದರೆ 2021 ರಲ್ಲಿ ಶೇಕಡಾ 80.3 ಕ್ಕೆ ಗಮನಾರ್ಹವಾಗಿ ಏರಿಕೆ ಕಂಡಿದೆ. ಗುರುವಾರ ಬಿಡುಗಡೆಯಾದ ಸರ್ಕಾರಿ ಸಮೀಕ್ಷೆಯ ಅಂಕಿ- ಅಂಶಗಳು ಈ ವಿಚಾರವನ್ನು ಬಹಿರಂಗಪಡಿಸಿವೆ.
ಅಂದರೆ 2021-22ರ ನಬಾರ್ಡ್‌ನ 'ಅಖಿಲ ಭಾರತ ಗ್ರಾಮೀಣ ಹಣಕಾಸು ಸೇರ್ಪಡೆ ಸಮೀಕ್ಷೆ NAFIS ಪ್ರಕಾರ, ಪ್ರತಿ ಐದು ಕುಟುಂಬಗಳಲ್ಲಿ ನಾಲ್ವರು ಕನಿಷ್ಠ ಒಬ್ಬ ವಿಮಾದಾರ ಸದಸ್ಯರನ್ನು ಹೊಂದಿದ್ದಾರೆ. ಕೃಷಿ ಕುಟುಂಬಗಳು ತಮ್ಮ ಕೃಷಿಯೇತರ ಆದಾಯವನ್ನು ಸರಿಸುಮಾರು ಶೇ 13ರಷ್ಟು ಹೆಚ್ಚಳ ಮಾಡಿಕೊಂಡಿವೆ ಅಂತಿದೆ ಈ ಸಮೀಕ್ಷೆ.
ವಿವಿಧ ವಿಧದ ವಿಮೆಗಳಲ್ಲಿ ವಾಹನ ವಿಮೆಯು ಹೆಚ್ಚು ಪ್ರಚಲಿತವಾಗಿದೆ. ಶೇ 55ರಷ್ಟು ಕುಟುಂಬಗಳು ವಾಹನ ವಿಮೆಯನ್ನು ಹೊಂದಿವೆ. ಶೇ 24 ರಷ್ಟು ಮಂದಿ ಈಗ ಜೀವ ವಿಮಾ ವ್ಯಾಪ್ತಿಗೆ ಬಂದಿದ್ದಾರೆ. ಕೃಷಿಯೇತರ ಕುಟುಂಬಗಳಿಗೆ (ಶೇ 20 ) ಹೋಲಿಸಿದರೆ ಕೃಷಿ ಕುಟುಂಬಗಳು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ವಿಮೆಯ ಮೊರೆ ಹೋಗುತ್ತಿದ್ದಾರೆ. ಇದರ ಪ್ರಮಾಣ ಈಗ ಶೇ 26ರಷ್ಟಿದೆ.
ಇದನ್ನು ಓದಿ:ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್ಗೆ ಸ್ಪೈಸ್ಜೆಟ್ ವಿಮಾನಯಾನ ಆರಂಭ: ಹೀಗಿದೆ ವೇಳಾಪಟ್ಟಿ
ಒಂದು ಮನೆಯಲ್ಲಿ ಕನಿಷ್ಠ ಒಬ್ಬರಿಗಾದರೂ ವಿಮೆ:2016-17 ರಲ್ಲಿ ಶೇ 25.5ರಷ್ಟಿದ್ದ ಪ್ರಮಾಣ 2021-22 ರಲ್ಲಿ ಶೇಕಡಾ 80.3 ಕ್ಕೆ ಏರಿಕೆಯಾಗಿದೆ. ಕನಿಷ್ಠ ಒಬ್ಬ ಸದಸ್ಯರನ್ನು ಹೊಂದಿರುವ ಕುಟುಂಬಗಳ ಶೇಕಡಾವಾರು ಈ ಮೂಲಕ ಭಾರಿ ಏರಿಕೆ ದಾಖಲಿಸಿದೆ ಎಂದು NAFIS ಸಮೀಕ್ಷೆಯು ಹೇಳಿದೆ. ಇದಲ್ಲದೇ, ಯಾವುದೇ ರೀತಿಯ ಪಿಂಚಣಿ (ವೃದ್ಧಾಪ್ಯ, ಕುಟುಂಬ, ನಿವೃತ್ತಿ ಅಥವಾ ಅಂಗವೈಕಲ್ಯ) ಪಡೆಯುವ ಕನಿಷ್ಠ ಒಬ್ಬ ಸದಸ್ಯರನ್ನು ಹೊಂದಿರುವ ಕುಟುಂಬಗಳ ಶೇಕಡಾವಾರು ಪ್ರಮಾಣವು 2016-17 ರಲ್ಲಿ ಶೇಕಡಾ 18.9 ರಿಂದ 2021-22 ರಲ್ಲಿ ಶೇಕಡಾ 23.5 ಕ್ಕೆ ಏರಿಕೆಯಾಗಿದೆ.
ಒಟ್ಟಾರೆಯಾಗಿ, 60 ವರ್ಷಕ್ಕಿಂತ ಮೇಲ್ಪಟ್ಟ ಕನಿಷ್ಠ ಒಬ್ಬ ಸದಸ್ಯರನ್ನು ಹೊಂದಿರುವ ಶೇ 54ರಷ್ಟು ಕುಟುಂಬಗಳು ವಿಮಾ ಪಿಂಚಣಿಯನ್ನು ಸ್ವೀಕರಿಸುತ್ತಿದ್ದಾರೆ ಎಂದು ವರದಿ ಮಾಡಿದೆ. ಇದು ಸಮಾಜದ ಹಿರಿಯ ಸದಸ್ಯರ ರಕ್ಷಣೆಗೆ ಪಿಂಚಣಿಗಳ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ತೋರಿಸುವಂತೆ ಮಾಡಿದೆ.
ಹೆಚ್ಚುತ್ತಿದೆ ಆರ್ಥಿಕ ಸಾಕ್ಷರತೆ:ಉತ್ತಮ ಆರ್ಥಿಕ ಸಾಕ್ಷರತೆ ಶೇಕಡಾ 17 ರಷ್ಟು ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ. 2016-17 ರಲ್ಲಿ ಶೇಕಡಾ 33.9ರಷ್ಟಿದ್ದ ಈ ಪ್ರಮಾಣ 2021-22 ರಲ್ಲಿ ಶೇಕಡಾ 51.3 ಕ್ಕೆ ಏರಿಕೆ ಕಂಡಿದೆ. ಸಮೀಕ್ಷೆಯ ಪ್ರಕಾರ, "ಹಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು, ತಿಳಿವಳಿಕೆಯುಳ್ಳ ಹಣಕಾಸಿನ ನಿರ್ಧಾರಗಳನ್ನು ಮಾಡುವುದು, ವೆಚ್ಚಗಳನ್ನು ಪತ್ತೆಹಚ್ಚುವುದು ಮತ್ತು ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಪಾವತಿಸುವಂತಹ ಉತ್ತಮ ಆರ್ಥಿಕ ನಡವಳಿಕೆಯನ್ನು ಪ್ರದರ್ಶಿಸುವ ವ್ಯಕ್ತಿಗಳ ಪ್ರಮಾಣವು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ, ಈ ಪ್ರಮಾಣ ಶೇಕಡಾ 56.4 ರಿಂದ ಶೇಕಡಾ 72.8 ಕ್ಕೆ ಏರಿಕೆಯಾಗಿದೆ ಎಂಬುದನ್ನು ಆರ್ಥಿಕ ಸಂಶೋಧನೆಗಳು ತೋರಿಸಿವೆ.
NAFIS ಸಮೀಕ್ಷೆಯ ಫಲಿತಾಂಶಗಳು 2016-17ರಲ್ಲಿ ಗ್ರಾಮೀಣ ಆರ್ಥಿಕ ಸೇರ್ಪಡೆಯಲ್ಲಿ ಮಾಡಿದ ಗಮನಾರ್ಹ ಪ್ರಗತಿಯನ್ನು ಎತ್ತಿ ತೋರಿಸುತ್ತಿವೆ. ಗ್ರಾಮೀಣ ಕುಟುಂಬಗಳು ಆದಾಯ, ಉಳಿತಾಯ, ವಿಮಾ ರಕ್ಷಣೆ ಮತ್ತು ಆರ್ಥಿಕ ಸಾಕ್ಷರತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ಕಂಡಿವೆ ಎಂಬುದು ಅಧ್ಯಯನದಲ್ಲಿ ಬಯಲಾಗಿದೆ.
ಸರ್ಕಾರದ ಕಲ್ಯಾಣ ಯೋಜನೆಗಳಿಂದ ಅನುಕೂಲ: ಸರ್ಕಾರದ ಕಲ್ಯಾಣ ಯೋಜನೆಗಳಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS), ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G), ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMAY-GSY), ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY NRLM), ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY) ಗ್ರಾಮೀಣ ಜನಸಂಖ್ಯೆಯ ಜೀವನವನ್ನು ಸುಧಾರಿಸಲು ಗಣನೀಯ ಕೊಡುಗೆ ನೀಡಿದೆ ಎಂದು ಸಮೀಕ್ಷೆ ತಿಳಿಸಿದೆ.
ಇದನ್ನು ಓದಿ:ತಿಂಗಳಿಗೆ ₹27 ಲಕ್ಷ ವೇತನ, ವರ್ಷಕ್ಕೆ 50 ದಿನ ರಜೆ: ರೊನಾಲ್ಡೊ ಹೋಟೆಲ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ