ನವದೆಹಲಿ: ಗ್ರಾಮೀಣ ಭಾಗದಲ್ಲಿ ವಾಹನ ಮಾರುಕಟ್ಟೆ ಬೆಳವಣಿಗೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ದ್ವಿಚಕ್ರ ವಾಹನ (2ಡಬ್ಲ್ಯೂ) ಉದ್ಯಮವು ಸೆಪ್ಟೆಂಬರ್ ತಿಂಗಳಲ್ಲಿ ಶೇ 22ರಷ್ಟು ಬೆಳವಣಿಗೆ (ವರ್ಷದಿಂದ ವರ್ಷಕ್ಕೆ) ಕಂಡಿದೆ ಎಂದು ವರದಿಯೊಂದು ತಿಳಿಸಿದೆ. ಬಿಎನ್ ಪಿ ಪರಿಬಾಸ್ ಇಂಡಿಯಾದ ವರದಿಯ ಪ್ರಕಾರ, ದೇಶದಲ್ಲಿ ತ್ರಿಚಕ್ರ ವಾಹನಗಳ (3W) ಮಾರಾಟ ಶೇಕಡಾ 8 ರಷ್ಟು ಬೆಳವಣಿಗೆಯಾಗಿದ್ದರೆ, ಟ್ರಾಕ್ಟರುಗಳ ಮಾರಾಟ ಶೇಕಡಾ 3 ರಷ್ಟು ಏರಿಕೆಯಾಗಿದೆ.
ಚಿಲ್ಲರೆ ಬೇಡಿಕೆ ಮಿಶ್ರವಾಗಿದ್ದರೂ ಈ ಬಾರಿಯ ಹಬ್ಬದ ಋತುವಿನಲ್ಲಿ ಮಾರಾಟ ಗಣನೀಯವಾಗಿ ಸುಧಾರಿಸಲಿದೆ ಎಂದು ಮೂಲ ಉಪಕರಣ ತಯಾರಕರು (ಒಇಎಂಗಳು) ಭರವಸೆ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾರತದಲ್ಲಿ ಶೇಕಡಾ 62 ರಷ್ಟು ದ್ವಿಚಕ್ರ ವಾಹನಗಳನ್ನು ಈಗ ಸಾಲದ ಮೂಲಕ ಖರೀದಿಸಲಾಗುತ್ತಿದೆ ಎಂದು ವರದಿ ಹೇಳಿದೆ. ನಗರಗಳಲ್ಲಿ ಸಾಲದ ಮೂಲಕ ವಾಹನ ಖರೀದಿಸುವ ಪ್ರಮಾಣ ಶೇ 58 ರಷ್ಟಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಯಿಂದಾಗಿ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಸಾಲ- ಚಾಲಿತ ಹಣಕಾಸು ಯೋಜನೆಗಳಲ್ಲಿ ದೊಡ್ಡ ಪ್ರಮಾಣದ ಏರಿಕೆ ಕಂಡುಬಂದಿದೆ.
ಪಿಎಂಜೆಡಿವೈ ಅಡಿಯಲ್ಲಿ 53 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಲಕ್ಷಾಂತರ ಗ್ರಾಮೀಣ ಭಾರತೀಯರನ್ನು ಮೊದಲ ಬಾರಿಗೆ ಔಪಚಾರಿಕ ಹಣಕಾಸು ವ್ಯವಸ್ಥೆಗೆ ತರಲಾಗಿದೆ.