ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ಸಮೀಪಕ್ಕೆ ಬರುತ್ತಿದ್ದಂತೆ, ಬಿಟ್ ಕಾಯಿನ್ ಮೌಲ್ಯ ದಾಖಲೆಯ ಗರಿಷ್ಠ 75,060 ಡಾಲರ್ಗೆ ಏರಿದೆ. ಇದು ಕ್ರಿಪ್ಟೋಕರೆನ್ಸಿ ಹೂಡಿಕೆದಾರರ ಉತ್ಸಾಹವನ್ನು ಹೆಚ್ಚಿಸಿದೆ. ವಿಶ್ವದ ಅತ್ಯಂತ ಮೌಲ್ಯಯುತ ಡಿಜಿಟಲ್ ಆಸ್ತಿಯಾಗಿರುವ ಬಿಟ್ ಕಾಯಿನ್ ಮೌಲ್ಯ ಮಂಗಳವಾರ (ಯುಎಸ್ ಸಮಯ) ಶೇಕಡಾ 7 ರಷ್ಟು ಏರಿಕೆಯಾಗಿದೆ.
ಟ್ರಂಪ್ ತಮ್ಮ ಪ್ರಚಾರದ ಸಮಯದಲ್ಲಿ ಬಿಟ್ ಕಾಯಿನ್ ಬಗ್ಗೆ ವ್ಯಾಪಕವಾಗಿ ಮಾತನಾಡಿದ್ದರು. ಅಮೆರಿಕವನ್ನು ವಿಶ್ವದ ಕ್ರಿಪ್ಟೊ ರಾಜಧಾನಿಯನ್ನಾಗಿ ಮಾಡುವುದಾಗಿ ಅವರು ವಾಗ್ದಾನ ಮಾಡಿದ್ದರು.
ಸದ್ಯ ಟ್ರಂಪ್ ಗೆಲುವಿನ ನಂತರ ಬಿಟ್ ಕಾಯಿನ್ ಮೌಲ್ಯ 75,000 ಡಾಲರ್ಗಿಂತ ಮೇಲಕ್ಕೇರಿ ಹೊಸ ದಾಖಲೆ ಬರೆದಿದೆ. ಬಿಟ್ ಕಾಯಿನ್ ಒಟ್ಟು ಮೌಲ್ಯ 1.5 ಟ್ರಿಲಿಯನ್ ಡಾಲರ್ ದಾಟಿರುವುದು ಗಮನಾರ್ಹ. ಬುಧವಾರ (ಭಾರತೀಯ ಸಮಯ) ಬಿಟ್ ಕಾಯಿನ್ ಒಂದು ಕಾಯಿನ್ ಬೆಲೆ 73,000 ಡಾಲರ್ ಆಗಿತ್ತು.
ಕ್ರಿಪ್ಟೋಕರೆನ್ಸಿ ಉದ್ಯಮಕ್ಕೆ ಉಂಟಾಗುತ್ತಿರುವ ಕಿರುಕುಳವನ್ನು ಕೊನೆಗೊಳಿಸುವುದಾಗಿ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು "ವಿಶ್ವದ ಬಿಟ್ ಕಾಯಿನ್ ಸೂಪರ್ ಪವರ್" ಮಾಡುವುದಾಗಿ ಟ್ರಂಪ್ ಪ್ರಚಾರದ ಸಮಯದಲ್ಲಿ ಹೇಳಿದ್ದರು. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಟ್ರಂಪ್ ಆಡಳಿತದ ಅಡಿಯಲ್ಲಿ ಹೆಚ್ಚಿನ ಬೇಡಿಕೆ, ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಭಾವನೆ ಮತ್ತು ಪೂರಕ ನೀತಿ ನಿಯಮಗಳ ಕಾರಣದಿಂದ ಬಿಟ್ ಕಾಯಿನ್ ಮೌಲ್ಯ ಮುಂದಿನ ದಿನಗಳಲ್ಲಿ 80,000 ಡಾಲರ್ ಗೆ ಏರಿಕೆಯಾಗಬಹುದು.