ಸ್ವಂತ ಮನೆ ಎನ್ನುವುದು ಅನೇಕರ ಕನಸು. ಇದಕ್ಕಾಗಿ ತಮ್ಮ ಜೀವನದ ಉದ್ದಕ್ಕೂ ದುಡಿದು ಹಣ ಕೂಡಿಟ್ಟು ಮನೆ ಕಟ್ಟುತ್ತಾರೆ. ಇನ್ನು ಕೆಲವರು ತಮ್ಮ ಕನಸಿನ ಮನೆ ಕಟ್ಟಲು ಬ್ಯಾಂಕ್ ಸಾಲ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಯಾವುದೇ ಚಿಂತೆಯಿಲ್ಲದೇ ಬಾಡಿಗೆ ಮನೆಯಲ್ಲಿ ಕಾಲ ಕಳೆಯುತ್ತಾರೆ. ಹಾಗಾದರೆ ನೀವು ಏನು ಯೋಚಿಸುತ್ತಿದ್ದೀರಿ?
ಸದ್ಯ ರಿಯಲ್ ಎಸ್ಟೇಟ್ ಭೂಮ್ಗೆ ಹೋಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮನೆ ಖರೀದಿಸಬೇಕೇ? ಅಥವಾ ಬಾಡಿಗೆ ಮನೆಯಲ್ಲಿ ಇರಬೇಕೆ? ಇವುಗಳಲ್ಲಿ ಯಾವುದು ಉತ್ತಮ ಆಯ್ಕೆ ಎಂಬುದನ್ನು ಈಗ ನೋಡೋಣ.
ಮನೆ ಖರೀದಿಯ ಲಾಭಗಳು:
- ಬ್ಯಾಂಕ್ ಸಾಲ ಪಡೆದು ಮನೆ ಖರೀದಿಸುವಾಗ ತೆರಿಗೆ ಪ್ರಯೋಜನಗಳು ಖಂಡಿತಾ ಇವೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಯ ಪ್ರಕಾರ, ಅಸಲು ಮೊತ್ತಕ್ಕೆ (ರೂ.1.5 ಲಕ್ಷದವರೆಗೆ) ತೆರಿಗೆ ವಿನಾಯಿತಿ ಇದೆ. ಸೆಕ್ಷನ್ 24 ರ ಅಡಿ ಗೃಹ ಸಾಲದ ಮೇಲಿನ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ (ರೂ. 2 ಲಕ್ಷದವರೆಗೆ).
- ಮನೆಯೇ ಒಂದು ದೊಡ್ಡ ಆಸ್ತಿ. ಇದರ ಮೌಲ್ಯವು ವಾರ್ಷಿಕವಾಗಿ (ಅಂದಾಜು) 8-10 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಇದು ನಿಮ್ಮ ಸಂತತಿಗೆ ತಲೆಮಾರುಗಳವರೆಗೆ ನೆರಳು ನೀಡುತ್ತದೆ. ಆರ್ಥಿಕವಾಗಿಯೂ ಇದು ಸಹಾಯ ಮಾಡುತ್ತದೆ.
- ಆರಂಭದಲ್ಲಿ ನೀವು ಪಾವತಿಸಬೇಕಾದ EMI ಹೆಚ್ಚು ಎಂದು ತೋರುತ್ತದೆ. ಆದರೆ, ಭವಿಷ್ಯದಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತಾ ಹೋಗುತ್ತದೆ. ಸಮಯ ಕಳೆದಂತೆ ಸ್ಥಿರ EMI ಪಾವತಿಸುವುದು ಸುಲಭವಾಗುತ್ತದೆ.
- ಸ್ವಂತ ಮನೆ ತೃಪ್ತಿ ಮತ್ತು ಭದ್ರತೆಯ ಭಾವವನ್ನು ನೀಡುತ್ತದೆ. ಆರ್ಥಿಕ ಸ್ಥಿರತೆ ನೀಡುತ್ತದೆ.
ಮನೆ ಖರೀದಿಯ ಅನಾನುಕೂಲಗಳು
- ಮನೆ ಖರೀದಿಸಲು ನಿಮ್ಮ ಬಳಿ ಸಾಕಷ್ಟು ಹಣ ಇರಬೇಕು. ಅಥವಾ ಬ್ಯಾಂಕ್ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಆಗಲೂ ದೊಡ್ಡ ಡೌನ್ ಪೇಮೆಂಟ್ ಅಗತ್ಯವಿದೆ. ಇದರ ಜೊತೆಗೆ ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕ ಇತ್ಯಾದಿಗಳು ಇದ್ದೇ ಇರುತ್ತವೆ.
- ಮನೆ ಖರೀದಿಸಿದ ನಂತರ ಕಾಲಕಾಲಕ್ಕೆ ರಿಪೇರಿ ಮತ್ತು ನವೀಕರಣಗಳನ್ನು ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ಮೇಲೆ ಸ್ವಲ್ಪ ಆರ್ಥಿಕ ಹೊರೆ ಬೀಳುತ್ತದೆ.
- ನೀವು ಯಾವುದೇ ಸಮಯದಲ್ಲಿ ಮನೆಯನ್ನು ಮಾರಿ ಹಣ ಸಂಪಾದಿಸಲು ಸಾಧ್ಯವಿಲ್ಲ. ಮಾರುಕಟ್ಟೆಯ ಪರಿಸ್ಥಿತಿಗಳನ್ನು ಅವಲಂಬಿಸಿ ಮನೆಯ ಬೆಲೆಗಳು ಏರಿಳಿತವಾಗುತ್ತವೆ. ಇದಲ್ಲದೇ, ಈ ಆಸ್ತಿ ಮಾರಾಟ ಪ್ರಕ್ರಿಯೆಯು ಪೂರ್ಣಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ.
ಬಾಡಿಗೆ ಮನೆಯಲ್ಲಿ ಉಳಿಯುವ ಪ್ರಯೋಜನಗಳು
- ಬಾಡಿಗೆ ಮನೆಗೆ ಪಾವತಿಸಬೇಕಾದ ಬಾಡಿಗೆಯು ಗೃಹ ಸಾಲದ EMI ಗಿಂತ ತುಂಬಾ ಕಡಿಮೆಯಾಗಿರುತ್ತದೆ. ಹಾಗಾಗಿ ಆರ್ಥಿಕ ಹೊರೆ ಅಷ್ಟಾಗಿ ಇರುವುದಿಲ್ಲ.
- ಬಾಡಿಗೆ ಮನೆ ದೊಡ್ಡದಾಗಿದ್ದರೆ 2 ಅಥವಾ 3 ತಿಂಗಳಿಗೆ ಸಾಕಾಗುವಷ್ಟು ಮುಂಗಡ ನೀಡುತ್ತೇವೆ. ಆದರೆ ಅದೇ ಮನೆ ಖರೀದಿಸಲು ದೊಡ್ಡ ಮಟ್ಟದಲ್ಲಿ ಮುಂಗಡ ಪಾವತಿ ಅಗತ್ಯವಿರುತ್ತದೆ.
- ಸ್ವಂತ ಮನೆಯಿಂದ ಇನ್ನೊಂದು ಮನೆಗೆ ಹೋಗುವುದು ತುಂಬಾ ಕಷ್ಟ. ಆದರೆ ಬಾಡಿಗೆ ಮನೆಯಲ್ಲಿ ಹಾಗಾಗುವುದಿಲ್ಲ. ನಿಮ್ಮ ಆಯ್ಕೆಯ ಮತ್ತೊಂದು ಮನೆಗೆ ನೀವು ಸುಲಭವಾಗಿ ಹೋಗಬಹುದು. ಸ್ವಂತ ಮನೆ ಇರುವವರು ತಕ್ಷಣ ಬೇರೆ ಪ್ರದೇಶಕ್ಕೆ ತೆರಳುವಂತಿಲ್ಲ. ಆದರೆ ಬಾಡಿಗೆ ಮನೆಯಲ್ಲಿ ಇರುವವರು ತಮ್ಮ ಆಯ್ಕೆಯ ಯಾವುದೇ ನಗರ ಅಥವಾ ಪ್ರದೇಶಕ್ಕೆ ಆರಾಮವಾಗಿ ಹೋಗಬಹುದು.