ನವದೆಹಲಿ: 2023-24ರ ಹಣಕಾಸು ವರ್ಷ ಕೊನೆಗೊಳ್ಳಲು ಕೇವಲ 10 ದಿನಗಳು ಬಾಕಿ ಇವೆ. ಆದರೆ, ಮಾರ್ಚ್ 31, 2024 ರೊಳಗೆ ತೆರಿಗೆ ಉಳಿತಾಯ ಮಾಡಲು ಏನು ಮಾಡಬೇಕೆಂಬುದು ಈಗಲೂ ಅನೇಕರಿಗೆ ತಿಳಿದಿಲ್ಲ. ತೆರಿಗೆ ಉಳಿತಾಯವು ಅನೇಕರಿಗೆ ಒತ್ತಡ ಮೂಡಿಸುವ ಕೆಲಸವಾಗಿದೆ. ಆದರೆ ಅದು ಯಾರಿಗೂ ಒತ್ತಡದ ಕೆಲಸವಾಗಬೇಕಿಲ್ಲ. ತೆರಿಗೆ ಉಳಿತಾಯ ಸಾಧನಗಳಲ್ಲಿ ವ್ಯೂಹಾತ್ಮಕವಾಗಿ ಹೂಡಿಕೆ ಮಾಡುವ ಮೂಲಕ, ಒಬ್ಬರು ತಮ್ಮ ತೆರಿಗೆ ಬಾಧ್ಯತೆಯನ್ನು ಕಡಿಮೆ ಮಾಡುವುದಲ್ಲದೇ, ಸಾಕಷ್ಟು ಉಳಿತಾಯದೊಂದಿಗೆ ಸುರಕ್ಷಿತ ಆರ್ಥಿಕ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು.
ವಿವಿಧ ತೆರಿಗೆ ಉಳಿತಾಯದ ಮಾರ್ಗಗಳನ್ನು ಪರಿಶೀಲಿಸುವ ಮೊದಲು, ತೆರಿಗೆ ಉಳಿತಾಯ ಹೂಡಿಕೆಗಳ ಮಹತ್ವವನ್ನು ಮೊದಲು ಅರ್ಥಮಾಡಿಕೊಳ್ಳೋಣ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಮತ್ತು ಇತರ ವಿಭಾಗಗಳ ಅಡಿಯಲ್ಲಿ ತೆರಿಗೆಗಳನ್ನು ಉಳಿಸಲು ಸರ್ಕಾರವು ತೆರಿಗೆದಾರರಿಗೆ ವಿವಿಧ ಮಾರ್ಗಗಳನ್ನು ಒದಗಿಸಿದೆ. ಈ ಹೂಡಿಕೆಗಳು ನಿಮ್ಮ ತೆರಿಗೆಗೆ ಒಳಪಡುವ ಆದಾಯವನ್ನು ಕಡಿಮೆ ಮಾಡುವುದಲ್ಲದೇ ಸಂಪತ್ತಿನ ಸೃಷ್ಟಿಯ ಸಾಮರ್ಥ್ಯವನ್ನು ಸಹ ನೀಡುತ್ತವೆ.
ಏನಿದು ಸೆಕ್ಷನ್ 80ಸಿ?: ಸೆಕ್ಷನ್ 80 ಸಿ ಇದು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ಗಳಲ್ಲಿ ಒಂದಾಗಿದೆ. ಇದು ತೆರಿಗೆದಾರರು ಠೇವಣಿ ಯೋಜನೆಗಳು ಮತ್ತು ವೆಚ್ಚಗಳಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ತೆರಿಗೆಗೆ ಒಳಪಡುವ ಆದಾಯದ ಮೇಲೆ ತೆರಿಗೆ ಕಡಿತ ಪಡೆಯಲು ಅನುವು ಮಾಡಿಕೊಡುತ್ತದೆ. ಪ್ರಸ್ತುತ ನಿಯಮಗಳ ಪ್ರಕಾರ, ಈ ನಿಬಂಧನೆಯ ಅಡಿ ಒಂದು ಹಣಕಾಸು ವರ್ಷದಲ್ಲಿ 1.5 ಲಕ್ಷ ರೂ.ಗಳವರೆಗೆ ತೆರಿಗೆ ಕಡಿತ ಪಡೆಯಬಹುದು. ಸೆಕ್ಷನ್ 80 ಸಿ ಅಡಿ ಎಲ್ಲ ಅರ್ಹ ಹೂಡಿಕೆಗಳು ಮತ್ತು ವೆಚ್ಚಗಳಿಗೆ 1.5 ಲಕ್ಷ ರೂ.ಗಳ ಮಿತಿ ಒಟ್ಟಾರೆಯಾಗಿ ಅನ್ವಯಿಸುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಪರಿಣಾಮಕಾರಿಯಾಗಿ ತೆರಿಗೆ ಉಳಿಸಲು ನಾವು ವಿವಿಧ ಬ್ಯಾಂಕಿಂಗ್ ಮತ್ತು ಹಣಕಾಸು ಯೋಜನೆಗಳನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ.
ತೆರಿಗೆ ಉಳಿತಾಯ ಯೋಜನೆಗಳು:
1. ಸ್ಥಿರ ಠೇವಣಿಗಳಿಂದ ತೆರಿಗೆ ಉಳಿತಾಯ: ಬ್ಯಾಂಕುಗಳ ಸ್ಥಿರ ಠೇವಣಿಗಳು ತೆರಿಗೆ ಉಳಿಸಲು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿವೆ. ಇವು ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತ ಸೌಲಭ್ಯ ನೀಡುತ್ತವೆ. ವಿವಿಧ ಅವಧಿಗಳವರೆಗೆ ಸ್ಥಿರ ಠೇವಣಿ ಇಡಬಹುದು ಮತ್ತು ಅದಕ್ಕೆ ಅನುಗುಣವಾಗಿ ಬಡ್ಡಿದರಗಳನ್ನು ಪಡೆಯಬಹುದು. ತಮ್ಮ ಹೂಡಿಕೆಗಳ ಮೇಲೆ ಸುರಕ್ಷಿತ ಮತ್ತು ಖಾತರಿಯ ಆದಾಯ ಬಯಸುವವರಿಗೆ ಇದು ಸೂಕ್ತವಾಗಿದೆ. ಸ್ಥಿರ ಠೇವಣಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ:
- ಲಾಕ್-ಇನ್ ಅವಧಿ: ತೆರಿಗೆ ಉಳಿತಾಯ ಎಫ್ಡಿಗಳು 5 ವರ್ಷಗಳ ಲಾಕ್-ಇನ್ ಅವಧಿ ಹೊಂದಿರುತ್ತವೆ. ಅಂದರೆ ನಿಮ್ಮ ಹಣವನ್ನು ಕನಿಷ್ಠ ಇಷ್ಟು ಅವಧಿಗೆ ಹೂಡಿಕೆ ಮಾಡಬೇಕಾಗುತ್ತದೆ.
- ತೆರಿಗೆ ಪ್ರಯೋಜನ: ತೆರಿಗೆ ಉಳಿತಾಯ ಎಫ್ಡಿಗಳಲ್ಲಿನ ಹೂಡಿಕೆಗಳು ಸೆಕ್ಷನ್ 80 ಸಿ ಅಡಿ ತೆರಿಗೆ ಕಡಿತಕ್ಕೆ ಅರ್ಹವಾಗಿವೆ. ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ. ತೆರಿಗೆ ವಿನಾಯಿತಿ ಪಡೆಯಬಹುದು.
- ಬಡ್ಡಿ ತೆರಿಗೆ:ತೆರಿಗೆ ಉಳಿತಾಯ ಎಫ್ಡಿಗಳ ಮೇಲೆ ಗಳಿಸಿದ ಬಡ್ಡಿಗೆ ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.
2. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್): ಪಿಪಿಎಫ್ ಇದು ಕೇಂದ್ರ ಸರ್ಕಾರದ ದೀರ್ಘಾವಧಿಯ ಉಳಿತಾಯ ಮತ್ತು ಹೂಡಿಕೆ ಯೋಜನೆಯಾಗಿದೆ ಮತ್ತು ಸಣ್ಣ ಉಳಿತಾಯ ಯೋಜನೆಗಳ ವರ್ಗಕ್ಕೆ ಸೇರುತ್ತದೆ. ಇದು ಸರ್ಕಾರದಿಂದ ಬೆಂಬಲಿತವಾಗಿರುವುದರಿಂದ, ತೆರಿಗೆದಾರರಿಗೆ ಲಭ್ಯವಿರುವ ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಪಿಪಿಎಫ್ ಸೆಕ್ಷನ್ 80 ಸಿ ಅಡಿ ತೆರಿಗೆ ಕಡಿತ ಪಡೆಯಲು ಇದು ಅವಕಾಶ ನೀಡುತ್ತದೆ.
ಇತರ ಅನೇಕ ತೆರಿಗೆ ಉಳಿತಾಯ ಹೂಡಿಕೆಗಳಿಗೆ ಹೋಲಿಸಿದರೆ ಪಿಪಿಎಫ್ 15 ವರ್ಷಗಳ ದೀರ್ಘ ಲಾಕ್-ಇನ್ ಅವಧಿ ಹೊಂದಿದೆ. ಇದು ಏಳನೇ ವರ್ಷದಿಂದ ಭಾಗಶಃ ಮೊತ್ತವನ್ನು ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಸಹ ನೀಡುತ್ತದೆ.
ಪ್ರಸ್ತುತ ಪಿಪಿಎಫ್ ಬಡ್ಡಿದರವು ಹಣಕಾಸು ವರ್ಷ 24 ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 7.1ರಷ್ಟಿದೆ. ಪಿಪಿಎಫ್ ಬಡ್ಡಿದರವನ್ನು ಭಾರತ ಸರ್ಕಾರ ನಿಯಂತ್ರಿಸುತ್ತದೆ ಮತ್ತು ಪ್ರತಿ ತ್ರೈಮಾಸಿಕಕ್ಕೊಮ್ಮೆ ಪರಿಷ್ಕರಿಸುತ್ತದೆ. ಪಿಪಿಎಫ್ ಮೇಲಿನ ಬಡ್ಡಿಯನ್ನು ಮಾಸಿಕವಾಗಿ ಲೆಕ್ಕಹಾಕಲಾಗುತ್ತದೆ, ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ ಮತ್ತು ಹಣಕಾಸು ವರ್ಷದ ಕೊನೆಯಲ್ಲಿ, ಅಂದರೆ ಮಾರ್ಚ್ 31 ರಂದು ಜಮೆ ಮಾಡಲಾಗುತ್ತದೆ. ವರ್ಷಕ್ಕೆ ಕನಿಷ್ಠ 500 ರೂ. ಹೂಡಿಕೆ ಮಾಡುವ ಮೂಲಕ ಖಾತೆಯನ್ನು ಸಕ್ರಿಯವಾಗಿಡಬಹುದು.
ಪಿಪಿಎಫ್ ಖಾತೆಯ ಮ್ಯಾಚುರಿಟಿಯ ನಂತರ ನೀವು ಬಯಸಿದರೆ ಅದನ್ನು ವಿಸ್ತರಿಸುವ ಆಯ್ಕೆ ನಿಮ್ಮ ಮುಂದಿದೆ. ಒಂದು ಬಾರಿಗೆ 5 ವರ್ಷದ ಅವಧಿಗೆ ಎಷ್ಟು ಬಾರಿ ಬೇಕಾದರೂ ಇದನ್ನು ವಿಸ್ತರಿಸಬಹುದು. ವಿಸ್ತೃತ ಅವಧಿ ಉದ್ದಕ್ಕೂ ನೀವು ಹೊಸದಾಗಿ ಹೂಡಿಕೆ ಮಾಡುವ ಅಗತ್ಯವಿರುವುದಿಲ್ಲ. ಕೆಲವು ಷರತ್ತುಗಳಿಗೆ ಒಳಪಟ್ಟು ನೀವು ಭಾಗಶಃ ಹೂಡಿಕೆಯನ್ನು ಹಿಂಪಡೆಯಬಹುದು. ಈ ಯೋಜನೆಯಲ್ಲಿ ಗಳಿಸಿದ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
3. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ):ಎನ್ಎಸ್ಸಿ ಇದು ಭಾರತೀಯ ನಿವಾಸಿಗಳಿಗೆ ರೂಪಿಸಲಾದ ಸರ್ಕಾರದ ಉಳಿತಾಯ ಯೋಜನೆಯಾಗಿದೆ. ಸರ್ಕಾರ ನಿಗದಿಪಡಿಸಿದ ಪೂರ್ವನಿರ್ಧರಿತ ಬಡ್ಡಿದರ ನೀಡುವುದರಿಂದ ಇದು ಸ್ಥಿರ-ಆದಾಯ ಹೂಡಿಕೆ ಆಯ್ಕೆಯಾಗಿದೆ. ಎನ್ಎಸ್ಸಿ ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತಗಳಿಗೆ ಅರ್ಹವಾಗಿದೆ. ಇದು 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ ಮತ್ತು ಖಾತರಿ ಆದಾಯವನ್ನು ಒದಗಿಸುತ್ತದೆ. ಹೀಗಾಗಿ, 5 ವರ್ಷಗಳ ಹೂಡಿಕೆ ಅವಧಿಯಲ್ಲಿ ಸುರಕ್ಷತೆ, ನಿರ್ದಿಷ್ಟ ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ಹುಡುಕುತ್ತಿರುವ ವ್ಯಕ್ತಿಗಳಿಗೆ ಇದು ಸೂಕ್ತ ಆಯ್ಕೆಯಾಗಿದೆ.
ಎನ್ಎಸ್ಸಿಯಿಂದ ಗಳಿಸಿದ ಬಡ್ಡಿ ಆದಾಯವು ಹೂಡಿಕೆದಾರರ ತೆರಿಗೆ ಶ್ರೇಣಿಯ ಆಧಾರದ ಮೇಲೆ ತೆರಿಗೆಗೆ ಒಳಪಟ್ಟಿರುತ್ತದೆ. ಆದಾಗ್ಯೂ, ಎನ್ಎಸ್ಸಿಯಲ್ಲಿ ಗಳಿಸಿದ ಬಡ್ಡಿಯನ್ನು ಪ್ರತಿ ಹಣಕಾಸು ವರ್ಷದಲ್ಲಿ ಹೂಡಿಕೆದಾರರಿಗೆ ಪಾವತಿಸಲಾಗುವುದಿಲ್ಲ.
ಎನ್ಎಸ್ಸಿಯಲ್ಲಿ ಹೂಡಿಕೆ ಮಾಡಬಹುದಾದ ಮೊತ್ತಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲವಾದರೂ, ವರ್ಷಕ್ಕೆ 1.5 ಲಕ್ಷ ರೂ.ವರೆಗಿನ ಹೂಡಿಕೆಗಳು ಮಾತ್ರ ಚಂದಾದಾರರಿಗೆ ಆದಾಯ ಕಾಯ್ದೆ ಕಾಯ್ದೆ 1961 ರ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ರಿಯಾಯಿತಿಗೆ ಅರ್ಹವಾಗಿರುತ್ತವೆ. ಇದಲ್ಲದೆ, ಪ್ರಮಾಣಪತ್ರಗಳ ಮೇಲೆ ಗಳಿಸಿದ ಬಡ್ಡಿಯನ್ನು ಆರಂಭಿಕ ಹೂಡಿಕೆಗೆ ಮತ್ತೆ ಸೇರಿಸಲಾಗುತ್ತದೆ ಮತ್ತು ತೆರಿಗೆ ವಿನಾಯಿತಿಗೆ ಅರ್ಹತೆ ಪಡೆಯುತ್ತದೆ. ಎನ್ಎಸ್ಸಿ ಮೇಲಿನ ಬಡ್ಡಿದರವು ಪ್ರಸ್ತುತ ಶೇಕಡಾ 7.7 ರಷ್ಟಿದೆ.
ಮೊದಲ ನಾಲ್ಕು ವರ್ಷಗಳವರೆಗೆ, ಎನ್ಎಸ್ಸಿಯಲ್ಲಿ ಗಳಿಸಿದ ಬಡ್ಡಿಯನ್ನು ಮರುಹೂಡಿಕೆ ಮಾಡಲಾಗುವುದರಿಂದ ಇದು ತೆರಿಗೆ ಕ್ರೆಡಿಟ್ಗೆ ಅರ್ಹವಾಗಿರುತ್ತದೆ. ಇದು ಒಟ್ಟಾರೆ ವಾರ್ಷಿಕ ಮಿತಿ 1.5 ಲಕ್ಷ ರೂ.ಗೆ ಒಳಪಟ್ಟಿರುತ್ತದೆ. ಆದಾಗ್ಯೂ, ಐದನೇ ವರ್ಷದಲ್ಲಿ ಗಳಿಸಿದ ಬಡ್ಡಿಯನ್ನು ಮರು ಹೂಡಿಕೆ ಮಾಡಲಾಗುವುದಿಲ್ಲ ಮತ್ತು ಹೀಗಾಗಿ ಇದಕ್ಕೆ ಹೂಡಿಕೆದಾರರಿಗೆ ಅನ್ವಯವಾಗುವ ಸ್ಲ್ಯಾಬ್ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ.
4. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್ಎಸ್): 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗಾಗಿ ವಿನ್ಯಾಸಗೊಳಿಸಲಾದ ಈ ಯೋಜನೆಯು ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ಗರಿಷ್ಠ 30 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು.
ಆದರೆ ಈ ಯೋಜನೆಯು ಹಿರಿಯ ನಾಗರಿಕರಿಗೆ ಮಾತ್ರ ಎಂಬುದು ಗಮನದಲ್ಲಿರಲಿ. ಆದಾಗ್ಯೂ, 55 ರಿಂದ 60 ವರ್ಷ ವಯಸ್ಸಿನ ನಿವೃತ್ತ ವ್ಯಕ್ತಿಗಳು ಸಹ ಇದರಲ್ಲಿ ಹೂಡಿಕೆ ಮಾಡಬಹುದು. ಆದರೆ ಅವರು ನಿವೃತ್ತಿ ಪ್ರಯೋಜನಗಳನ್ನು ಪಡೆದ ಒಂದು ತಿಂಗಳೊಳಗೆ ಹೂಡಿಕೆ ಮಾಡಬೇಕಾಗುತ್ತದೆ.
ಎಸ್ಸಿಎಸ್ಎಸ್ 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಮುಕ್ತಾಯದ ನಂತರ ಇದನ್ನು ಹೆಚ್ಚುವರಿ 3 ವರ್ಷಗಳವರೆಗೆ ವಿಸ್ತರಿಸಬಹುದು. ಎಸ್ಸಿಎಸ್ಎಸ್ ಮೇಲಿನ ಬಡ್ಡಿದರವನ್ನು ಸರ್ಕಾರ ನಿಗದಿಪಡಿಸುತ್ತದೆ ಮತ್ತು ಇದು ಬದಲಾವಣೆಗೆ ಒಳಪಟ್ಟಿರುತ್ತದೆ. ಇದರ ಬಡ್ಡಿದರಗಳು ಸಾಮಾನ್ಯವಾಗಿ ಸಾಮಾನ್ಯ ಎಫ್ಡಿಗಳಿಗಿಂತ ಹೆಚ್ಚಾಗಿರುತ್ತದೆ.
ಎಸ್ಸಿಎಸ್ಎಸ್ನಲ್ಲಿನ ಹೂಡಿಕೆಗಳು ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿವೆ. ಇದು ಒಟ್ಟಾರೆ ಮಿತಿ 1.5 ಲಕ್ಷ ರೂ.ಗೆ ಒಳಪಟ್ಟಿರುತ್ತದೆ. ಎಸ್ಸಿಎಸ್ಎಸ್ನಿಂದ ಬರುವ ಬಡ್ಡಿ ಆದಾಯವು ಒಂದು ಹಣಕಾಸು ವರ್ಷದಲ್ಲಿ 50,000 ರೂ. ಮೀರಿದರೆ ಅದು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ. ಎಸ್ಸಿಎಸ್ಎಸ್ ಮೇಲಿನ ಬಡ್ಡಿದರ ವರ್ಷಕ್ಕೆ ಶೇಕಡಾ 8.2 ರಷ್ಟಿದೆ.
5. ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ವೈ): ಸುಕನ್ಯಾ ಸಮೃದ್ಧಿ ಯೋಜನೆ ಅತ್ಯುತ್ತಮ ತೆರಿಗೆ ಉಳಿತಾಯ ಹೂಡಿಕೆ ಯೋಜನೆಯಾಗಿದ್ದು, ಇದನ್ನು ವಿಶೇಷವಾಗಿ ಹೆಣ್ಣು ಮಗುವಿನ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಒಂದು ಕುಟುಂಬದಲ್ಲಿ ಹೆಣ್ಣು ಮಗುವಿಗೆ (10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಮತ್ತು ಗರಿಷ್ಠ 2 ಹೆಣ್ಣು ಮಕ್ಕಳಿಗೆ ಮಾತ್ರ ಖಾತೆಯನ್ನು ತೆರೆಯಬಹುದು. ಎಸ್ಎಸ್ವೈ ಖಾತೆದಾರರು ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 250 ರೂ ಮತ್ತು ಗರಿಷ್ಠ 1.5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು.
ಈ ಯೋಜನೆಗೆ ಲಾಕ್-ಇನ್ ಅವಧಿ ಇರುತ್ತದೆ ಎಂಬುದು ಗಮನದಲ್ಲಿರಲಿ. ಸಾಮಾನ್ಯವಾಗಿ ಹೆಣ್ಣು ಮಗುವಿಗೆ 21 ವರ್ಷ ವಯಸ್ಸಾಗುವವರೆಗೆ ಅಥವಾ ಮದುವೆಯಾಗುವವರೆಗೆ, ಯಾವುದು ಮೊದಲೋ ಆ ಅವಧಿಯವರೆಗೆ ಯೋಜನೆ ಲಾಕ್ ಆಗಿರುತ್ತದೆ. ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಅಥವಾ 10 ನೇ ತರಗತಿ ತೇರ್ಗಡೆಯಾದ ನಂತರ ಶೈಕ್ಷಣಿಕ ಉದ್ದೇಶಗಳಿಗಾಗಿ ಮೊತ್ತವನ್ನು ಭಾಗಶಃ ಹಿಂಪಡೆಯಬಹುದು.