ನವದೆಹಲಿ: ಆನ್ಲೈನ್ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿ ಮುಂಬರುವ ತಿಂಗಳಲ್ಲಿ ಆಹಾರ ಆರ್ಡರ್ಗಳ ಪ್ಲಾಟ್ಫಾರ್ಮ್ ಶುಲ್ಕವನ್ನು 5 ರೂ.ಗಳಿಂದ 10 ರೂ.ಗೆ ದ್ವಿಗುಣಗೊಳಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಯೊಂದು ಮಂಗಳವಾರ ತಿಳಿಸಿದೆ. ಈ ಕ್ರಮದೊಂದಿಗೆ, ಕಂಪನಿಯು ತನ್ನ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಬಿಡುಗಡೆಗೆ ಮುಂಚಿತವಾಗಿ ನಷ್ಟ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಬಳಕೆದಾರರ ಸಣ್ಣ ಗುಂಪನ್ನು ಗುರಿಯಾಗಿಸುವ ಮೂಲಕ ಸ್ವಿಗ್ಗಿ ತನ್ನ ಅಪ್ಲಿಕೇಶನ್ನಲ್ಲಿ ಪ್ಲಾಟ್ಫಾರ್ಮ್ ಶುಲ್ಕದಲ್ಲಿ ಹೆಚ್ಚಳ ಮಾಡಲು ಪ್ರಾರಂಭಿಸಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ ಕಂಪನಿಯು ಕೆಲವೇ ಗ್ರಾಹಕರಿಗೆ 2 ರೂ.ಗಳ ನಾಮಿನಲ್ ಶುಲ್ಕ ವಿಧಿಸಿತ್ತು. ನಂತರ ಅದನ್ನು ಎಲ್ಲ ಗ್ರಾಹಕರಿಗೆ ವಿಸ್ತರಿಸಲಾಯಿತು. ಪ್ರಸ್ತುತ ಪ್ಲಾಟ್ಫಾರ್ಮ್ ಶುಲ್ಕವನ್ನು 5 ರೂ.ಗೆ ನಿಗದಿಪಡಿಸಲಾಗಿದೆ. 10 ರೂ.ಗಳ ಪ್ಲಾಟ್ಫಾರ್ಮ್ ಶುಲ್ಕವು ತಾನು ಮುಂದುವರಿಸುತ್ತಿರುವ ಅನೇಕ ಪ್ರಯೋಗಗಳಲ್ಲಿ ಒಂದಾಗಿದೆ ಎಂದು ಕಂಪನಿ ಹೇಳಿದೆ.
"ಸ್ವಿಗ್ಗಿ ತನ್ನ ಪ್ಲಾಟ್ಫಾರ್ಮ್ ಶುಲ್ಕವನ್ನು ಬದಲಾಯಿಸಿಲ್ಲ ಮತ್ತು ಹತ್ತಿರ ಭವಿಷ್ಯದಲ್ಲಿ ಗಮನಾರ್ಹ ಹೆಚ್ಚಳದ ಯಾವುದೇ ಯೋಜನೆಯನ್ನು ಹೊಂದಿಲ್ಲ. ಗ್ರಾಹಕರ ಆಯ್ಕೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಾವು ಯಾವಾಗಲೂ ಸಣ್ಣ ಪ್ರಯೋಗಗಳನ್ನು ಮಾಡುತ್ತಿರುತ್ತೇವೆ" ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.