ಮುಂಬೈ:ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಗುರುವಾರದ ವಹಿವಾಟಿನಲ್ಲಿ ತಲಾ ಶೇಕಡಾ 1 ಕ್ಕಿಂತ ಹೆಚ್ಚು ಲಾಭದೊಂದಿಗೆ ದಾಖಲೆಯ ಗರಿಷ್ಠ ಮಟ್ಟದಲ್ಲಿ ಮುಕ್ತಾಯಗೊಂಡಿವೆ.
ಬಿಎಸ್ಇ ಸೆನ್ಸೆಕ್ಸ್ 1,439.55 ಪಾಯಿಂಟ್ಸ್ ಅಥವಾ ಶೇಕಡಾ 1.77 ರಷ್ಟು ಏರಿಕೆಯಾಗಿ 82,962.71 ರಲ್ಲಿ ಕೊನೆಗೊಂಡಿದೆ. ದಿನದ ವಹಿವಾಟಿನಲ್ಲಿ ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠ 83,116.19 ಕ್ಕೆ ತಲುಪಿತ್ತು. ಹಾಗೆಯೇ ನಿಫ್ಟಿ50 ಸಹ 470.45 ಪಾಯಿಂಟ್ಸ್ ಅಥವಾ ಶೇಕಡಾ 1.89 ರಷ್ಟು ಏರಿಕೆಯಾಗಿ 25,388.90 ರಲ್ಲಿ ಕೊನೆಗೊಂಡಿದೆ. ಗುರುವಾರದ ಇಂಟ್ರಾ-ಡೇ ವಹಿವಾಟಿನಲ್ಲಿ ನಿಫ್ಟಿ ಸಾರ್ವಕಾಲಿಕ ಗರಿಷ್ಠ 25,433.35 ಕ್ಕೆ ತಲುಪಿತ್ತು.
ನೆಸ್ಲೆ ಇಂಡಿಯಾ ಹೊರತುಪಡಿಸಿ ನಿಫ್ಟಿ 50 ಯಲ್ಲಿನ ಎಲ್ಲಾ ಷೇರುಗಳು ಏರಿಕೆಯೊಂದಿಗೆ ಕೊನೆಗೊಂಡವು. ಹಿಂಡಾಲ್ಕೊ ಇಂಡಸ್ಟ್ರೀಸ್, ಭಾರ್ತಿ ಏರ್ ಟೆಲ್, ಎನ್ಟಿಪಿಸಿ, ಶ್ರೀರಾಮ್ ಫೈನಾನ್ಸ್ ಮತ್ತು ಮಹೀಂದ್ರಾ & ಮಹೀಂದ್ರಾ ಗುರುವಾರ ಶೇಕಡಾ 4.15 ರಷ್ಟು ಲಾಭ ಗಳಿಸಿದವು. ಹಾಗೆಯೇ ಬಿಎಸ್ಇಯಲ್ಲಿ ಕೂಡ ನೆಸ್ಲೆ ಇಂಡಿಯಾ ಹೊರತುಪಡಿಸಿ ಸೆನ್ಸೆಕ್ಸ್ ಎಲ್ಲಾ ಷೇರುಗಳು ಏರಿಕೆಯೊಂದಿಗೆ ಕೊನೆಗೊಂಡವು. ಸೆನ್ಸೆಕ್ಸ್ನಲ್ಲಿ ಭಾರ್ತಿ ಏರ್ಟೆಲ್, ಎನ್ ಟಿಪಿಸಿ, ಜೆಎಸ್ಡಬ್ಲ್ಯೂ ಸ್ಟೀಲ್ ಮತ್ತು ಮಹೀಂದ್ರಾ & ಮಹೀಂದ್ರಾ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ.