ಕರ್ನಾಟಕ

karnataka

ETV Bharat / business

ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್​ಗೆ ಸ್ಪೈಸ್​ಜೆಟ್​ ವಿಮಾನಯಾನ ಆರಂಭ

ಶಿವಮೊಗ್ಗದಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಹೊಸ ಉಡಾನ್ ವಿಮಾನಯಾನವನ್ನು ಪ್ರಾರಂಭಿಸುವುದಾಗಿ ಸ್ಪೈಸ್ ಜೆಟ್ ಘೋಷಿಸಿದೆ.

By ETV Bharat Karnataka Team

Published : 5 hours ago

ಸ್ಪೈಸ್​ ಜೆಟ್ ವಿಮಾನ
ಸ್ಪೈಸ್​ ಜೆಟ್ ವಿಮಾನ (ETV Bharat)

ನವದೆಹಲಿ:ಸ್ಪೈಸ್ ಜೆಟ್ ಅಕ್ಟೋಬರ್ 10, 2024ರಿಂದ ಕರ್ನಾಟಕದ ಶಿವಮೊಗ್ಗದಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಹೊಸ ಉಡಾನ್ ವಿಮಾನಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಮೂಲಕ ಸ್ಪೈಸ್ ಜೆಟ್‌ನ ದೇಶೀಯ ನೆಟ್‌ವರ್ಕ್​ನಲ್ಲಿ ಶಿವಮೊಗ್ಗ ಹೊಸ ನಿಲ್ದಾಣವಾಗಿ ಸೇರ್ಪಡೆಯಾಗಿದೆ. 3,000 ಕೋಟಿ ರೂ.ಗಳ ಕ್ವಾಲಿಫೈಡ್ ಇನ್‌ಸ್ಟಿಟ್ಯೂಷನಲ್ ಪ್ಲೇಸ್‌ಮೆಂಟ್ (ಕ್ಯೂಐಪಿ) ನಂತರ ಇದು ಸ್ಪೈಸ್‌ಜೆಟ್​ ಕಂಪನಿ ಆರಂಭಿಸಿರುವ ಮೊದಲ ಹೊಸ ವಿಮಾನಸಂಚಾರವಾಗಿದೆ.

ಹೊಸ ಮಾರ್ಗದಲ್ಲಿ ವಿಮಾನಗಳು ಮಂಗಳವಾರ ಹೊರತುಪಡಿಸಿ ಪ್ರತಿದಿನ ಕಾರ್ಯನಿರ್ವಹಿಸಲಿದ್ದು, ಶಿವಮೊಗ್ಗ ಮತ್ತು ಪ್ರಮುಖ ಮೆಟ್ರೋ ನಗರಗಳ ನಡುವಿನ ಪ್ರಯಾಣಿಕರಿಗೆ ಅನುಕೂಲಕರ ಪ್ರಯಾಣದ ಆಯ್ಕೆಗಳನ್ನು ನೀಡಲಿವೆ. ಈ ಮೂಲಕ ಪ್ರವಾಸೋದ್ಯಮ, ವ್ಯಾಪಾರ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ.

ಇದಲ್ಲದೆ ಸ್ಪೈಸ್ ಜೆಟ್ ಪ್ರಮುಖ ನಗರಗಳಾದ ಚೆನ್ನೈ ಮತ್ತು ಕೊಚ್ಚಿಯನ್ನು ಸಂಪರ್ಕಿಸುವ ಪ್ರತಿದಿನ ಎರಡು ಬಾರಿಯ ವಿಮಾನ ಸೇವೆಯನ್ನು ಪ್ರಾರಂಭಿಸುತ್ತಿದ್ದು, ಇದು ಅಕ್ಟೋಬರ್ 10, 2024ರಿಂದ ಪ್ರಾರಂಭವಾಗಲಿದೆ.

ಸ್ಪೈಸ್ ಜೆಟ್‌ನ ಮುಖ್ಯ ವ್ಯವಹಾರ ಅಧಿಕಾರಿ ದೆಬೊಜೊ ಮಹರ್ಷಿ ಮಾತನಾಡಿ, "ಶಿವಮೊಗ್ಗವನ್ನು ನಮ್ಮ ನೆಟ್‌ವರ್ಕ್‌ಗೆ ಸೇರಿಸಲು ಮತ್ತು ಎರಡು ಪ್ರಮುಖ ಆರ್ಥಿಕ ಕೇಂದ್ರಗಳಾದ ಚೆನ್ನೈ ಮತ್ತು ಹೈದರಾಬಾದ್​ನೊಂದಿಗೆ ಸಂಪರ್ಕಿಸಲು ನಾವು ಉತ್ಸುಕರಾಗಿದ್ದೇವೆ. ಈ ವಿಸ್ತರಣೆಯು ಉಡಾನ್ ಯೋಜನೆಯಡಿ ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುವ ಮತ್ತು ಭಾರತದಾದ್ಯಂತ ಹೆಚ್ಚಿನ ಪ್ರಯಾಣಿಕರಿಗೆ ಕೈಗೆಟುಕುವ, ತಡೆರಹಿತ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಹೆಚ್ಚುವರಿಯಾಗಿ, ಚೆನ್ನೈ ಮತ್ತು ಕೊಚ್ಚಿ ನಡುವಿನ ದೈನಂದಿನ ವಿಮಾನಗಳು ಈ ಮಾರ್ಗದಲ್ಲಿನ ಹೆಚ್ಚುವರಿ ಬೇಡಿಕೆಯನ್ನು ಪೂರೈಸುವ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತವೆ" ಎಂದರು.

ಕರ್ನಾಟಕದ ಒಂದು ಸುಂದರ ನಗರವಾದ ಶಿವಮೊಗ್ಗವು ಶ್ರೀಮಂತ ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮೂಲಸೌಕರ್ಯಗಳಿಗೆ ಹೆಸರುವಾಸಿಯಾಗಿದೆ. ಸ್ಪೈಸ್ ಜೆಟ್ ನೆಟ್‌ವರ್ಕ್‌ಗೆ ಸೇರ್ಪಡೆಯೊಂದಿಗೆ, ಶ್ರೇಣಿ -2 ನಗರಗಳಿಂದ ಕೈಗೆಟುಕುವ ವಿಮಾನ ಪ್ರಯಾಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಮತ್ತು ಅವುಗಳನ್ನು ಪ್ರಮುಖ ನಗರ ಕೇಂದ್ರಗಳಿಗೆ ಹತ್ತಿರ ತರುವ ಗುರಿಯನ್ನು ವಿಮಾನಯಾನ ಸಂಸ್ಥೆ ಸ್ಪೈಸ್​ಜೆಟ್​ ಹೊಂದಿದೆ. 78 ಆಸನಗಳ ಡಿ ಹ್ಯಾವಿಲ್ಯಾಂಡ್ ಕೆನಡಾ ಕ್ಯೂ-400 ವಿಮಾನವನ್ನು ಈ ಮಾರ್ಗಗಳಲ್ಲಿ ಕಂಪನಿಯು ನಿಯೋಜಿಸಲಿದೆ.

ಸೆಪ್ಟೆಂಬರ್ 23ರಂದು ಷೇರುಗಳ ಕ್ವಾಲಿಫೈಡ್ ಇನ್ ಸ್ಟಿಟ್ಯೂಷನಲ್ ಪ್ಲೇಸ್ ಮೆಂಟ್ (ಕ್ಯೂಐಪಿ) ಮೂಲಕ 3,000 ಕೋಟಿ ರೂ.ಗಳನ್ನು ಸಂಗ್ರಹಿಸಿದ ನಂತರ ಬಾಕಿ ಇರುವ ಎಲ್ಲಾ ವೇತನ ಮತ್ತು ಜಿಎಸ್‌ಟಿ ಬಾಕಿಗಳನ್ನು ಪಾವತಿಸಿರುವುದಾಗಿ ಸ್ಪೈಸ್ ಜೆಟ್ ಶುಕ್ರವಾರ ಪ್ರಕಟಿಸಿದೆ.

ಇದನ್ನೂ ಓದಿ: ಫೋರ್ಬ್ಸ್ 100 ಶ್ರೀಮಂತ ಭಾರತೀಯರ ಪಟ್ಟಿ: ಅಂಬಾನಿ ನಂ.1, 2ನೇ ಸ್ಥಾನದಲ್ಲಿ ಅದಾನಿ

ABOUT THE AUTHOR

...view details