ಮುಂಬೈ: ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳ (ಸ್ಟಾಕ್ ಮಾರ್ಕೆಟ್) ಲಾಭದ ಓಟಕ್ಕೆ ಬ್ರೇಕ್ ಬಿದ್ದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಬಂದ ಋಣಾತ್ಮಕ ಸಂಕೇತಗಳಿಂದಾಗಿ ಇಂದು ಸೂಚ್ಯಂಕಗಳು ಕುಸಿದವು. ಸೆನ್ಸೆಕ್ಸ್ 900 ಹಾಗು ನಿಫ್ಟಿ 293 ಅಂಕಗಳನ್ನು ಕಳೆದುಕೊಂಡಿತು.
ಅಮೆರಿಕದಲ್ಲಿ ಬಿಡುಗಡೆಯಾದ ಫ್ಯಾಕ್ಟರಿ ದತ್ತಾಂಶ ಹಾಗು ಇಸ್ರೇಲ್-ಹಮಾಸ್ ನಡುವಿನ ಯುದ್ಧದ ಕಾರ್ಮೋಡ ಹೂಡಿಕೆದಾರರಲ್ಲಿ ಆತಂಕ ಉಂಟುಮಾಡಿದೆ. ಇದರಿಂದಾಗಿ ಏಷ್ಯಾ ಮತ್ತು ಭಾರತದ ಮಾರುಕಟ್ಟೆಗಳೂ ನಷ್ಟ ಅನುಭವಿಸಿವೆ.
ಹೂಡಿಕೆದಾರರ ಸಂಪತ್ತು ಇಂದಿನ ಒಂದೇ ಅಧಿವೇಶನದಲ್ಲಿ ಸುಮಾರು 5 ಲಕ್ಷ ಕೋಟಿ ರೂ.ಗಳಷ್ಟು ಕರಗಿದೆ. ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಒಟ್ಟು ಮೌಲ್ಯ 462 ಲಕ್ಷ ಕೋಟಿ ರೂ.ಯಿಂದ 457 ಲಕ್ಷ ಕೋಟಿ ರೂ.ಗೆ ಇಳಿದಿದೆ.
ದಿನದಂತ್ಯಕ್ಕೆ ಸೆನ್ಸೆಕ್ಸ್ 885.60 ಅಂಕ ನಷ್ಟದೊಂದಿಗೆ 80,981.60ಕ್ಕೆ ವ್ಯವಹಾರ ಮುಗಿಸಿತು. ನಿಫ್ಟಿ 293 ಅಂಕ ಕಳೆದುಕೊಂಡು 24,717 ಅಂಕಗಳಿಗೆ ಸ್ಥಿರವಾಯಿತು.