ಕರ್ನಾಟಕ

karnataka

ETV Bharat / business

ಸತತ 5ನೇ ದಿನ ಷೇರು ಮಾರುಕಟ್ಟೆ ಕುಸಿತ: ಸೆನ್ಸೆಕ್ಸ್​ 660 ಅಂಕ ಇಳಿಕೆ, ಹೂಡಿಕೆದಾರರಿಗೆ 6 ಲಕ್ಷ ಕೋಟಿ ಲಾಸ್ - SHARE MARKET TODAY

ಭಾರತದ ಷೇರು ಮಾರುಕಟ್ಟೆ ಸತತ 5ನೇ ದಿನವೂ ಕುಸಿತವಾಗಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (IANS)

By ETV Bharat Karnataka Team

Published : Oct 25, 2024, 5:24 PM IST

ಮುಂಬೈ: ಭಾರತೀಯ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಶುಕ್ರವಾರ ಸತತ ಐದನೇ ದಿನದಂದು ಕುಸಿತ ಕಂಡಿವೆ. ಸೆನ್ಸೆಕ್ಸ್ 650 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದರೆ, ನಿಫ್ಟಿ 24,200ಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ಖಾಸಗಿ ವಲಯದ ಇಂಡಸ್ಇಂಡ್ ಬ್ಯಾಂಕ್ ಮತ್ತು ವಿದ್ಯುತ್ ಕಂಪನಿ ಎನ್‌ಟಿಪಿಸಿಯ ನಿರಾಶಾದಾಯಕ 2ನೇ ತ್ರೈಮಾಸಿಕದ ಫಲಿತಾಂಶಗಳು ಕುಸಿತಕ್ಕೆ ಕಾರಣವಾಗಿವೆ.

30 ಷೇರುಗಳ ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 663 ಪಾಯಿಂಟ್ಸ್ ಅಥವಾ ಶೇಕಡಾ 0.83ರಷ್ಟು ಕುಸಿದು 79,402ರಲ್ಲಿ ಕೊನೆಗೊಂಡಿದೆ. ಹಾಗೆಯೇ ವಿಶಾಲ ಎನ್ಎಸ್ಇ ನಿಫ್ಟಿ 218 ಪಾಯಿಂಟ್ಸ್​ ಅಥವಾ ಶೇಕಡಾ 0.9ರಷ್ಟು ಕುಸಿದು 24,180ರಲ್ಲಿ ಕೊನೆಗೊಂಡಿದೆ. ಎರಡೂ ಸೂಚ್ಯಂಕಗಳು ಸೆಪ್ಟೆಂಬರ್ 27ರಂದು ದಾಖಲಾದ ದಾಖಲೆಯ ಗರಿಷ್ಠ ಮಟ್ಟದಿಂದ ಸುಮಾರು ಶೇಕಡಾ 8ರಷ್ಟು ಕುಸಿದಿವೆ ಮತ್ತು ಮಾರ್ಚ್ 2020ರ ನಂತರ ಒಂದು ತಿಂಗಳಲ್ಲಿ ಅತ್ಯಧಿಕ ಕುಸಿತ ಕಂಡಿವೆ.

ಬಿಎಸ್ಇಯಲ್ಲಿ ಲಿಸ್ಟ್​ ಮಾಡಲಾದ ಎಲ್ಲ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು 6.03 ಲಕ್ಷ ಕೋಟಿ ರೂ. ಕಡಿಮೆಯಾಗಿ 437.76 ಲಕ್ಷ ಕೋಟಿ ರೂ.ಗೆ ಇಳಿದಿದೆ.

ಇಂಡಸ್ಇಂಡ್ ಬ್ಯಾಂಕ್, ಮಹೀಂದ್ರಾ & ಮಹೀಂದ್ರಾ, ಲಾರ್ಸನ್ & ಟೂಬ್ರೊ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟಾರೆಯಾಗಿ 418 ಪಾಯಿಂಟ್ಸ್​ ಇಳಿಕೆಗೆ ಕಾರಣವಾದವು. ಇದಲ್ಲದೆ ಎನ್​ಟಿಪಿಸಿ, ಎಚ್​ಡಿಎಫ್​ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇನ್ಫೋಸಿಸ್ ಮತ್ತು ಬಜಾಜ್ ಫೈನಾನ್ಸ್ ಸಹ ನಷ್ಟ ಅನುಭವಿಸಿವೆ.

ವಲಯವಾರು ನೋಡುವುದಾದರೆ- ನಿಫ್ಟಿ ಆಟೋ, ಮಾಧ್ಯಮ, ಲೋಹ, ಪಿಎಸ್​ಯು ಬ್ಯಾಂಕ್, ತೈಲ ಮತ್ತು ಅನಿಲ ಮತ್ತು ಗ್ರಾಹಕ ಬೆಲೆಬಾಳುವ ವಸ್ತುಗಳು ತಲಾ ಶೇಕಡಾ 2ಕ್ಕಿಂತ ಹೆಚ್ಚು ಕುಸಿದವು. ಏತನ್ಮಧ್ಯೆ, ಫಿಯರ್ ಗೇಜ್ ಇಂಡಿಯಾ ವಿಎಕ್ಸ್ ಶೇಕಡಾ 4.74ರಷ್ಟು ಏರಿಕೆಯಾಗಿ 14.63ಕ್ಕೆ ತಲುಪಿದೆ.

ಅಮೆರಿಕದ ಕರೆನ್ಸಿ ಬಲವಾಗಿರುವುದು ಮತ್ತು ದೊಡ್ಡ ಮಟ್ಟದ ವಿದೇಶಿ ನಿಧಿಯ ಹೊರಹರಿವಿನಿಂದಾಗಿ ರೂಪಾಯಿ ಶುಕ್ರವಾರ ಯುಎಸ್ ಡಾಲರ್ ವಿರುದ್ಧ ಸಾರ್ವಕಾಲಿಕ ಕನಿಷ್ಠ 84.08 (ತಾತ್ಕಾಲಿಕ)ಕ್ಕೆ ಇಳಿದಿದೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ ಡಾಲರ್ ವಿರುದ್ಧ 84.07ರಲ್ಲಿ ಪ್ರಾರಂಭವಾಯಿತು ಮತ್ತು ದಿನದಲ್ಲಿ 84.07ರಿಂದ 84.09ರ ಸೀಮಿತ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ರೂಪಾಯಿ ಅಂತಿಮವಾಗಿ ಡಾಲರ್ ವಿರುದ್ಧ 84.08 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಗುರುವಾರದ ಮುಕ್ತಾಯದ ಮಟ್ಟಕ್ಕಿಂತ 1 ಪೈಸೆ ಕಡಿಮೆಯಾಗಿದೆ. ರುಪಾಯಿ ಅಕ್ಟೋಬರ್ 11ರಂದು ಡಾಲರ್ ವಿರುದ್ಧ 84.10ರ ಕನಿಷ್ಠ ಮಟ್ಟಕ್ಕೆ ತಲುಪಿತ್ತು.

ಇದನ್ನೂ ಓದಿ: ಅ.31ರಿಂದ ಬೆಂಗಳೂರು-ಕೊಲಂಬೊ ನಡುವೆ ಹಗಲು ವಿಮಾನಯಾನ ಆರಂಭ

For All Latest Updates

ABOUT THE AUTHOR

...view details