ಮುಂಬೈ: ಮಂಗಳವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗುತ್ತಿರುವಂತೆಯೇ ಸೆನ್ಸೆಕ್ಸ್ ಮತ್ತು ನಿಫ್ಟಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡವು. ಮಾರುಕಟ್ಟೆಯ ನಿರೀಕ್ಷೆಗಳನ್ನು ಮೀರಿ ಕಾಂಗ್ರೆಸ್ ನೇತೃತ್ವದ ಐಎನ್ಡಿಐಎ ಮೈತ್ರಿಕೂಟವು ಹೆಚ್ಚು ಸ್ಥಾನಗಳಲ್ಲಿ ಲೀಡ್ ಪಡೆದುಕೊಳ್ಳುತ್ತಿರುವುದು ಈ ಪ್ರವೃತ್ತಿಗೆ ಕಾರಣವಾಗಿದೆ.
ಇಂದಿನ ವಹಿವಾಟಿನಲ್ಲಿ ಪಿಎಸ್ ಯು, ರಕ್ಷಣಾ ಮತ್ತು ರೈಲ್ವೆ ಸಂಬಂಧಿತ ಷೇರುಗಳು ಕುಸಿದವು. ಅದಾನಿ ಸಮೂಹದ ಬಹುತೇಕ ಷೇರುಗಳು ಕೂಡ ಇಳಿಕೆಯಲ್ಲಿ ವಹಿವಾಟು ನಡೆಸುತ್ತಿವೆ. ಬೆಳಗ್ಗೆ 10.50 ಕ್ಕೆ, 30-ಪ್ಯಾಕ್ ಸೆನ್ಸೆಕ್ಸ್ ಸೂಚ್ಯಂಕವು 3047 ಪಾಯಿಂಟ್ ಅಥವಾ ಶೇಕಡಾ 3.98 ರಷ್ಟು ಕುಸಿದು 73,421ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 918 ಪಾಯಿಂಟ್ ಅಥವಾ ಶೇಕಡಾ 3.95 ರಷ್ಟು ಕುಸಿದು 22,345 ಕ್ಕೆ ತಲುಪಿದೆ. ಬಿಎಸ್ಇ ಪಿಎಸ್ ಯು ಸೂಚ್ಯಂಕವು ಸುಮಾರು 5 ಪ್ರತಿಶತದಷ್ಟು ಕುಸಿದರೆ, ಅದಾನಿ ಗ್ರೂಪ್ ಷೇರುಗಳು ಶೇಕಡಾ 12 ರವರೆಗೆ ಕುಸಿದವು.
ಸೆನ್ಸೆಕ್ಸ್ ಷೇರುಗಳ ಪೈಕಿ ಎನ್ಟಿಪಿಸಿ ಶೇ 6.16, ಎಸ್ಬಿಐ ಶೇ .5.94 ಮತ್ತು ಪವರ್ ಗ್ರಿಡ್ ಶೇ 5.85ರಷ್ಟು ಕುಸಿದವು. ಲಾರ್ಸನ್ ಆಂಡ್ ಟರ್ಬೋ, ಬಜಾಜ್ ಫಿನ್ ಸರ್ವ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇಕಡಾ 5 ರಷ್ಟು ಕುಸಿದವು.
ಅದಾನಿ ಷೇರುಗಳಲ್ಲಿ, ಅದಾನಿ ಎಂಟರ್ ಪ್ರೈಸಸ್ ಶೇಕಡಾ 9.62 ರಷ್ಟು ಕುಸಿದು 3,295.10 ರೂ.ಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡಾ 8.91 ರಷ್ಟು ಕುಸಿದು 1,443.80 ರೂ.ಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡಾ 8.91 ರಷ್ಟು ಕುಸಿದು 797 ರೂ.ಗೆ ತಲುಪಿದೆ. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಮತ್ತು ಅದಾನಿ ಎನರ್ಜಿ ಸಲ್ಯೂಷನ್ಸ್ ಶೇಕಡಾ 10 ರಿಂದ 11 ರಷ್ಟು ಕುಸಿದವು.