ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಈ ಹಿಂದೆ ಸತತ ಏಳು ಸಲ ರೆಪೊ ದರವನ್ನು ಬದಲಾಯಿಸದೆ ಶೇಕಡಾ 6.50 ರಲ್ಲಿ ಸ್ಥಿರವಾಗಿರಿಸಿದೆ. ಆದರೆ ಪ್ರಸ್ತುತ ಹವಾಮಾನ ಮತ್ತು ಕಚ್ಚಾ ತೈಲ ಬೆಲೆಗಳನ್ನು ಅವಲಂಬಿಸಿ 2024 ರ ಮಧ್ಯದಿಂದ ಆರ್ಬಿಐ ರೆಪೊ ಬಡ್ಡಿದರ ಕಡಿತಗೊಳಿಸಬಹುದು ಎಂದು ಕ್ರಿಸಿಲ್ ಮುನ್ಸೂಚನೆ ನೀಡಿದೆ. ಸಾಮಾನ್ಯ ಮಾನ್ಸೂನ್ ಆಗಮನದ ನಿರೀಕ್ಷೆ ಮತ್ತು ಆಸ್ತಿ ಕೇಂದ್ರಿತ ಬಜೆಟ್ ಮಂಡನೆಯ ನಿರೀಕ್ಷೆಗಳ ಮಧ್ಯೆ 2024-25ರಲ್ಲಿ ಹಣದುಬ್ಬರವು ಶೇ 4.5 ಕ್ಕೆ ಇಳಿಯುವ ನಿರೀಕ್ಷೆಯಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಈ ತಿಂಗಳ ಸಭೆಯಲ್ಲಿ ಏಳನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ 2024 ರ ಮಧ್ಯಭಾಗದಿಂದ ಬಡ್ಡಿದರ ಕಡಿತ ಪ್ರಾರಂಭವಾಗಲಿದೆ ರೇಟಿಂಗ್ ಏಜೆನ್ಸಿ ಕ್ರಿಸಿಲ್ ನಿರೀಕ್ಷಿಸಿದೆ. ಅಸಮ ಹಣದುಬ್ಬರ ಪ್ರವೃತ್ತಿಗಳನ್ನು ಗಮನಿಸಿದರೆ ಆರ್ಬಿಐನ ಹಣಕಾಸು ನೀತಿ ಸಮಿತಿಯು ಹಣದುಬ್ಬರವು ಶೇಕಡಾ 4ಕ್ಕೆ ಇಳಿಕೆಯಾಗುವ ಸಮಯಕ್ಕೆ ಕಾಯುತ್ತಿದೆ ಎಂದು ಕ್ರಿಸಿಲ್ ಹೇಳಿದೆ.
ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಆರ್ಬಿಐನ ಶೇಕಡಾ 2 ರಿಂದ 6 ರಷ್ಟು ಅನುಕೂಲಕರ ಮಟ್ಟದಲ್ಲಿದೆ. ಆದರೆ ಇದು ಆದರ್ಶ ಮಟ್ಟವಾದ ಶೇಕಡಾ 4 ಕ್ಕಿಂತ ಹೆಚ್ಚಾಗಿದೆ. ಮಾರ್ಚ್ನಲ್ಲಿ ಇದು ಶೇ 4.85ರಷ್ಟಿತ್ತು. ಮುಂದುವರಿದ ಆರ್ಥಿಕತೆಗಳು ಸೇರಿದಂತೆ ಅನೇಕ ದೇಶಗಳಲ್ಲಿ ಹಣದುಬ್ಬರ ಹೆಚ್ಚಾಗುತ್ತಿದೆ. ಆದರೆ ಭಾರತವು ತನ್ನ ಹಣದುಬ್ಬರವನ್ನು ಕಡಿಮೆ ಮಟ್ಟದಲ್ಲಿ ಕಾಪಾಡಿಕೊಳ್ಳಲು ಯಶಸ್ವಿಯಾಗಿದೆ.