ಮುಂಬೈ: ಆರ್ಟಿಜಿಎಸ್ ಅಥವಾ ಎನ್ಇಎಫ್ಟಿ ವ್ಯವಸ್ಥೆಯ ಮೂಲಕ ಹಣ ಕಳುಹಿಸುವ ಮುನ್ನ ಹಣ ಕಳುಹಿಸುವವರು ಫಲಾನುಭವಿ ಖಾತೆದಾರರ ಹೆಸರನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುವಂಥ ಸೌಲಭ್ಯ ಜಾರಿಗೊಳಿಸಬೇಕಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸೋಮವಾರ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.
"ಆರ್ಟಿಜಿಎಸ್ ಮತ್ತು ಎನ್ಇಎಫ್ಟಿಯ ನೇರ ಅಥವಾ ಉಪ ಸದಸ್ಯರಾಗಿರುವ ಎಲ್ಲಾ ಬ್ಯಾಂಕುಗಳು ಏಪ್ರಿಲ್ 1, 2025 ರ ನಂತರ ಈ ಸೌಲಭ್ಯವನ್ನು ನೀಡುವಂತೆ ಸೂಚಿಸಲಾಗಿದೆ" ಎಂದು ಆರ್ಬಿಐ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಸೌಲಭ್ಯ ಜಾರಿಯಾದರೆ ಹಣ ಕಳುಹಿಸುವವರು ಫಲಾನುಭವಿಯ ಖಾತೆ ಸಂಖ್ಯೆ ಮತ್ತು ಶಾಖೆ ಐಎಫ್ಎಸ್ಸಿ ಕೋಡ್ ನಮೂದಿಸಿದ ನಂತರ ಅವರಿಗೆ ಫಲಾನುಭವಿ ಖಾತೆಯ ಹೆಸರು ಗೋಚರವಾಗಲಿದೆ. ಇದರಿಂದ ತಪ್ಪಾದ ಖಾತೆಗಳಿಗೆ ಹಣ ಜಮೆಯಾಗುವುದನ್ನು ಮತ್ತು ವಂಚನೆಗಳನ್ನು ತಡೆಗಟ್ಟಬಹುದು ಹಾಗೂ ಇದರಿಂದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಗ್ರಾಹಕರ ವಿಶ್ವಾಸ ಹೆಚ್ಚಾಗಲಿದೆ.
ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ (ಆರ್ಟಿಜಿಎಸ್) ಮತ್ತು ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ (ಎನ್ಇಎಫ್ಟಿ) ವ್ಯವಸ್ಥೆಗಳಿಗೆ ಫಲಾನುಭವಿ ಬ್ಯಾಂಕ್ ಖಾತೆ ಹೆಸರಿನ ಲುಕ್- ಅಪ್ ಸೌಲಭ್ಯವನ್ನು ಪರಿಚಯಿಸಲು ಅಕ್ಟೋಬರ್ 9, 2024 ರ ಆರ್ಬಿಐ ನ ಅಭಿವೃದ್ಧಿ ಮತ್ತು ನಿಯಂತ್ರಣ ನೀತಿಗಳ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿತ್ತು.
ಪ್ರಸ್ತುತ, ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ಮತ್ತು ತಕ್ಷಣದ ಪಾವತಿ ಸೇವೆ (ಐಎಂಪಿಎಸ್) ವ್ಯವಸ್ಥೆಗಳಲ್ಲಿ ಹಣ ವರ್ಗಾವಣೆಯನ್ನು ಪ್ರಾರಂಭಿಸುವ ಮೊದಲು ಫಲಾನುಭವಿಯ ಹೆಸರನ್ನು ಪರಿಶೀಲಿಸಲು ಅವಕಾಶವಿದೆ. ಈಗ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಹಣ ವರ್ಗಾವಣೆಯಲ್ಲಿಯೂ ಈ ಸೌಲಭ್ಯವನ್ನು ಪರಿಚಯಿಸಲು ನಿರ್ಧರಿಸಲಾಗಿದೆ.
ಅದರಂತೆ ಈ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಎಲ್ಲಾ ಬ್ಯಾಂಕುಗಳನ್ನು ಈ ವ್ಯವಸ್ಥೆಯಡಿ ತರಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಗೆ ಸೂಚಿಸಲಾಗಿದೆ ಎಂದು ಆರ್ಬಿಐ ಎಲ್ಲಾ ಬ್ಯಾಂಕುಗಳಿಗೆ ಸುತ್ತೋಲೆಯಲ್ಲಿ ತಿಳಿಸಿದೆ. ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಸಿಸ್ಟಮ್ಸ್ ನಲ್ಲಿರುವ ಬ್ಯಾಂಕುಗಳು ಈ ಸೌಲಭ್ಯವನ್ನು ತಮ್ಮ ಗ್ರಾಹಕರಿಗೆ ಇಂಟರ್ ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ಲಭ್ಯವಾಗುವಂತೆ ಮಾಡಬೇಕು ಎಂದು ಆರ್ಬಿಐ ನಿರ್ದೇಶಿಸಿದೆ.
ಇದನ್ನೂ ಓದಿ : 2024ರ ವಿವಿಧ ಶ್ರೇಯಾಂಕ ಪಟ್ಟಿಗಳಲ್ಲಿ ಕರ್ನಾಟಕದ ಸ್ಥಾನವೆಷ್ಟು? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ - KARNATAKA RANKING IN VARIOUS INDEX