ನವದೆಹಲಿ: ದೇಶದ ಎರಡು ಪ್ರಮುಖ ರಿಯಾಲ್ಟಿ ಹಾಟ್ ಸ್ಪಾಟ್ಗಳಾದ ದೆಹಲಿ ಎನ್ಸಿಆರ್ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶ (ಎಂಎಂಆರ್)ಗಳಲ್ಲಿನ ಸರಾಸರಿ ವಸತಿ ಬೆಲೆಗಳು ಕಳೆದ ಐದು ವರ್ಷಗಳಲ್ಲಿ ಶೇಕಡಾ 49ರಷ್ಟು ಏರಿಕೆಯಾಗಿವೆ ಎಂದು ವರದಿಯೊಂದು ಭಾನುವಾರ ತೋರಿಸಿದೆ.
ಇತ್ತೀಚಿನ ಅನಾರಾಕ್ (Anarock) ಅಂಕಿಅಂಶಗಳ ಪ್ರಕಾರ, ದೆಹಲಿ ಎನ್ಸಿಆರ್ ಪ್ರದೇಶದಲ್ಲಿ 2019ರ ಮೊದಲಾರ್ಧದಲ್ಲಿ ಸರಾಸರಿ ವಸತಿ ಬೆಲೆಗಳಲ್ಲಿ ಶೇಕಡಾ 49ರಷ್ಟು ಏರಿಕೆಯಾಗಿದ್ದರೆ, ಎಂಎಂಆರ್ ಪ್ರದೇಶದಲ್ಲಿ ಇದೇ ಅವಧಿಯಲ್ಲಿ ಸರಾಸರಿ ವಸತಿ ಬೆಲೆಗಳು ಶೇಕಡಾ 48ರಷ್ಟು ಏರಿಕೆಯಾಗಿವೆ.
ವಸತಿ ಕಟ್ಟಡಗಳ ಮಾರಾಟ ಹೆಚ್ಚಾಗಿದ್ದರಿಂದ ದೆಹಲಿ ಎನ್ಸಿಆರ್ನಲ್ಲಿ ಮಾರಾಟವಾಗದ ಕಟ್ಟಡಗಳ ಪ್ರಮಾಣ ಶೇ 52ರಷ್ಟು ಮತ್ತು ಎಂಎಂಆರ್ ಪ್ರದೇಶದಲ್ಲಿ ಮಾರಾಟವಾಗದ ಕಟ್ಟಡಗಳ ಪ್ರಮಾಣ ಶೇ 13ರಷ್ಟು ಇಳಿಕೆಯಾಗಿದೆ. ಎನ್ಸಿಆರ್ ನಲ್ಲಿ ಸುಮಾರು 2.72 ಲಕ್ಷ ಯುನಿಟ್ ಮತ್ತು ಎಂಎಂಆರ್ ಪ್ರದೇಶದಲ್ಲಿ 5.50 ಲಕ್ಷ ಯುನಿಟ್ನಷ್ಟು ಮನೆಗಳು ಮಾರಾಟವಾಗಿವೆ ಎಂದು ವರದಿ ತಿಳಿಸಿದೆ.
ಎನ್ಸಿಆರ್ನಲ್ಲಿ ಸರಾಸರಿ ವಸತಿ ಬೆಲೆಗಳು ಪ್ರತಿ ಚದರ ಅಡಿಗೆ 4,565 ರೂ.ಗಳಿಂದ 6,800 ರೂ.ಗೆ ಏರಿಕೆಯಾಗಿವೆ ಎಂದು ಅನಾರಾಕ್ ಗ್ರೂಪ್ನ ಅಧ್ಯಕ್ಷ ಅನುಜ್ ಪುರಿ ಹೇಳಿದ್ಧಾರೆ. "ಎಂಎಂಆರ್ ಪ್ರದೇಶದಲ್ಲಿ ಸರಾಸರಿ ವಸತಿ ಬೆಲೆಗಳು ಶೇಕಡಾ 48ರಷ್ಟು ಏರಿಕೆಯಾಗಿವೆ. 2019ರ ಮೊದಲಾರ್ಧದಲ್ಲಿ ಪ್ರತಿ ಚದರ ಅಡಿಗೆ 10,610 ರೂ. ಇದ್ದ ಬೆಲೆಗಳು 2024 ರ ಮೊದಲಾರ್ಧದಲ್ಲಿ ಪ್ರತಿ ಚದರ ಅಡಿಗೆ 15,650 ರೂ.ಗೆ ಏರಿಕೆಯಾಗಿವೆ" ಎಂದು ಅವರು ಹೇಳಿದರು.
ಕಟ್ಟಡ ನಿರ್ಮಾಣ ವೆಚ್ಚ ತೀವ್ರವಾಗಿ ಏರಿಕೆಯಾಗಿರುವುದು ಮತ್ತು ಬೇಡಿಕೆ ಹೆಚ್ಚಾಗಿರುವ ಕಾರಣಗಳಿಂದ ದೆಹಲಿ-ಎನ್ಸಿಆರ್ ಮತ್ತು ಎಂಎಂಆರ್ ಪ್ರದೇಶಗಳಲ್ಲಿ ವಸತಿ ಕಟ್ಟಡಗಳ ಬೆಲೆಗಳು ಹೆಚ್ಚಾಗಿವೆ. ಕೊರೊನಾ ಸಾಂಕ್ರಾಮಿಕ ಅಲೆ ಕಡಿಮೆಯಾದ ನಂತರ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅಗತ್ಯವಾದ ಉತ್ತೇಜನ ಸಿಕ್ಕಿದೆ. ಆರಂಭದಲ್ಲಿ ಡೆವಲಪರ್ಗಳು ವಿವಿಧ ಆಫರ್ಗಳು ಮತ್ತು ಡಿಸ್ಕೌಂಟ್ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸಿದ್ದರು. ಆದರೆ ಬೇಡಿಕೆ ಹೆಚ್ಚಾದಂತೆ ಅವರು ಈ ಆಫರ್ಗಳನ್ನು ನಿಲ್ಲಿಸಿ ಕಟ್ಟಡಗಳ ಬೆಲೆಗಳನ್ನು ಹೆಚ್ಚಿಸಿದರು ಎಂದು ವರದಿ ಹೇಳಿದೆ.
2019ರ ಮೊದಲಾರ್ಧ ಮತ್ತು 2024 ರ ಮೊದಲಾರ್ಧಗಳ ನಡುವೆ ದೆಹಲಿ ಎನ್ ಸಿಆರ್ ನಲ್ಲಿ ಸುಮಾರು 1.72 ಲಕ್ಷ ಯುನಿಟ್ ಹೊಸ ಕಟ್ಟಡಗಳ ನಿರ್ಮಾಣ ಪ್ರಾರಂಭಿಸಲಾಗಿದೆ. ಎಂಎಂಆರ್ ಪ್ರದೇಶದಲ್ಲಿ ಪ್ರಸ್ತುತ ಸುಮಾರು 1.95 ಲಕ್ಷ ಯುನಿಟ್ ಹೊಸ ಕಟ್ಟಡಗಳು ಮಾರಾಟಕ್ಕೆ ಇವೆ.
ಇದನ್ನೂ ಓದಿ: ಏರಿಕೆಯತ್ತ ಷೇರು ಮಾರುಕಟ್ಟೆ: ಜೂನ್ನಲ್ಲಿ 42 ಲಕ್ಷ ಡಿಮ್ಯಾಟ್ ಖಾತೆ ಓಪನ್ - Demat Accounts