ನವದೆಹಲಿ: ಶೇ 97ರಷ್ಟು ಗ್ರಾಮೀಣ ಭಾರತದಲ್ಲಿ ಮೊಬೈಲ್ ನೆಟ್‌ವರ್ಕ್ ಲಭ್ಯವಿದೆ. ದೇಶದ 6,44,131 ಗ್ರಾಮಗಳ ಪೈಕಿ 6,22,840 ಗ್ರಾಮಗಳು ಮೊಬೈಲ್ ಫೋನ್ ಸಂಪರ್ಕ ಹೊಂದಿವೆ. ಈ ಪೈಕಿ 6,14,564 ಗ್ರಾಮಗಳಲ್ಲಿ 4ಜಿ ಮೊಬೈಲ್ ಸಂಪರ್ಕವಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿತು.
ಬುಡಕಟ್ಟು ವ್ಯವಹಾರಗಳ ಸಚಿವಾಲಯದ 'ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ' (ಪಿಎಂ ಜನಮಾನ್) ಅಡಿಯಲ್ಲಿನ 4,543 ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ವಸತಿಗಳನ್ನು ಮೊಬೈಲ್ ಸಂಪರ್ಕವಿಲ್ಲದ ಸ್ಥಳಗಳು ಎಂದು ಗುರುತಿಸಲಾಗಿದೆ ಮತ್ತು ಈ ಪೈಕಿ 1,136 ಪಿವಿಟಿಜಿ ವಸತಿಗಳಿಗೆ ಮೊಬೈಲ್ ಸಂಪರ್ಕ ಒದಗಿಸಲಾಗಿದೆ ಎಂದು ಸಂವಹನ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಡಾ.ಚಂದ್ರಶೇಖರ್ ಪೆಮ್ಮಸಾನಿ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 31ರವರೆಗೆ, ವಿವಿಧ ಡಿಜಿಟಲ್ ಭಾರತ್ ನಿಧಿ ಅನುದಾನಿತ ಮೊಬೈಲ್ ಯೋಜನೆಗಳ ಅಡಿಯಲ್ಲಿ ಪಿವಿಟಿಜಿ ಜನವಸತಿಗಳಿಗೆ 4ಜಿ ವ್ಯಾಪ್ತಿಯನ್ನು ಒದಗಿಸಲು 1,014 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 1,018 ಮೊಬೈಲ್ ಟವರ್ಗಳನ್ನು ಮಂಜೂರು ಮಾಡಲಾಗಿದೆ.
"ಪಿವಿಟಿಜಿ ಜನವಸತಿಗಳು ಸೇರಿದಂತೆ ದೇಶದ ಗ್ರಾಮೀಣ, ದೂರದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಮೊಬೈಲ್ ಟವರ್ಗಳನ್ನು ಸ್ಥಾಪಿಸುವ ಮೂಲಕ ಟೆಲಿಕಾಂ ಸಂಪರ್ಕವನ್ನು ವಿಸ್ತರಿಸಲು ಸರ್ಕಾರ ಡಿಜಿಟಲ್ ಭಾರತ್ ನಿಧಿಯಡಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ" ಎಂದು ಸಚಿವರು ಹೇಳಿದರು.