ಬೆಳಗಾವಿ: ವಿವಿಧ ಯೋಜನೆಗಳು ಹಾಗೂ ಖರ್ಚುಗಳನ್ನು ನಿಭಾಯಿಸಲು ಪ್ರಸಕ್ತ ಆರ್ಥಿಕ ವರ್ಷದಲ್ಲಿ 90,280 ಕೋಟಿ ರೂ ಸಾಲ ಪಡೆಯಲಾಗಿದೆ. ಆರ್ಥಿಕ ಶಿಸ್ತಿನ ವ್ಯಾಪ್ತಿಯೊಳಗೆ ಸಾಲ ಪಡೆದಿದ್ದು, ರಾಜ್ಯದ ವಿತ್ತೀಯ ಕೊರತೆ ಶೇ 2.6ರಷ್ಟಿದೆ. ಅಲ್ಲದೇ, ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡ ಮತ್ತು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಸಾಲಮಿತಿಗೆ ಒಳಪಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸರ್ಕಾರ ಪಂಚ ಗ್ಯಾರಂಟಿಗಳ ಯೋಜನೆಗಳಿಗಾಗಿ 56,009 ಕೋಟಿ ರೂ ಬಜೆಟ್ನಲ್ಲಿ ಮೀಸಲಿರಿಸಲಾಗಿದೆ. ಇನ್ನಿತರ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು 90,280 ಕೋಟಿ ರೂ ಸಾಲ ಪಡೆಯಲಾಗಿದೆ. ವಿತ್ತೀಯ ಕೊರತೆ ವ್ಯಾಪ್ತಿಯಲ್ಲಿ ಸಾಲ ಪಡೆದಿದ್ದೇವೆ. ಪಂಜಾಬ್, ಕೇರಳ, ಆಂಧ್ರ, ಹಿಮಾಚಲ ಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳು ಮಿತಿಗಿಂತ ಹೆಚ್ಚು ಸಾಲ ಪಡೆದುಕೊಂಡಿವೆ ಎಂದು ಜೆಡಿಎಸ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಪ್ರಶ್ನೆಗೆ ಸಿದ್ದರಾಮಯ್ಯ ಅಂಕಿ-ಅಂಶಗಳ ಮೂಲಕ ವಿವರಿಸಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿಲ್ಲ. ವಿರೋಧ ಪಕ್ಷಗಳ ಆರೋಪಗಳು ಸತ್ಯಕ್ಕೆ ದೂರವಾಗಿದೆ. ರಾಜ್ಯದಲ್ಲಿ ಪ್ರಸಕ್ತ 2023-24ರಲ್ಲಿ ಅಭಿವೃದ್ಧಿ ವೆಚ್ಚಗಳಿಗಾಗಿ 1,14,292 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆಯವ್ಯಯದಲ್ಲಿ 52,009 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಮಧ್ಯಪ್ರವೇಶಿಸಿದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪರಿಶಿಷ್ಠ ಜಾತಿ-ಪಂಗಡಗಳಿಗೆ ಮೀಸಲಿರಿಸಿದ್ದ ಹಣ ಬಳಸಿರುವುದನ್ನು ಆಕ್ಷೇಪಿಸಿದ್ದಕ್ಕೆ ಉತ್ತರಿಸಿದ ಸಿಎಂ, ಗ್ಯಾರಂಟಿಗಳಿಗಾಗಿ ಮೀಸಲಿಸಿರುವ ಹಣವನ್ನು ಬಳಕೆ ಮಾಡಲಾಗುತ್ತದೆ. ಮಂಜೂರು ಮಾಡಿರುವ ಹಣವನ್ನು ನೋಡಿಕೊಂಡು ವಿವಿಧ ಮೂಲಗಳಿಂದ ಹಣ ಖರ್ಚು ಮಾಡುತ್ತೇವೆ. ಪೂರಕ ಅಯವ್ಯಯದಲ್ಲಿ 39,272 ಕೋಟಿ ಸಾವಿರ ಕೋಟಿ ಮೀಸಲಿರಿಸಲಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಎಸ್ಇಪಿ ಹಾಗೂ ಟಿಎಸ್ಪಿ ಯೋಜನೆಗಳಿವೆಯಾ ಎಂದು ಪ್ರಶ್ನಿಸಿದರು.
ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳಲ್ಲಿ ಇಲ್ಲ. ಗುತ್ತಿಗೆ ಪದ್ದತಿಯಲ್ಲಿ ಮೀಸಲಾತಿ ಸಹ ಯಾವ ರಾಜ್ಯದಲ್ಲಿಯೂ ಇಲ್ಲ ಎಂದು ಹೇಳುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಆಕ್ಷೇಪಿಸಿದರು. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕಿತ್ತುಕೊಂಡಿರಿ ಎಂದು ನಾರಾಯಣಸ್ವಾಮಿ ವಿರೋಧಿಸಿದರು.
ಇದನ್ನೂ ಓದಿ: ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿದ ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್