ನವದೆಹಲಿ: ಭಾರತದ ಬ್ಯಾಂಕುಗಳ ಆಸ್ತಿ ಗುಣಮಟ್ಟವು ಮತ್ತಷ್ಟು ಸುಧಾರಿಸಿದ್ದು, ಅವುಗಳ ಒಟ್ಟು ಅನುತ್ಪಾದಕ ಆಸ್ತಿ (ಜಿಎನ್ಪಿಎ) 2024 ರ ಸೆಪ್ಟೆಂಬರ್ನಲ್ಲಿ ಒಟ್ಟು ಸಾಲಗಳ ಶೇಕಡಾ 2.6 ಕ್ಕೆ ಇಳಿದಿದೆ. ಇದು ಕಳೆದ 12 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮಟ್ಟವಾಗಿದೆ ಎಂದು ಆರ್ಬಿಐನ ಇತ್ತೀಚಿನ ಹಣಕಾಸು ಸ್ಥಿರತೆ ವರದಿ ತಿಳಿಸಿದೆ. ಡಿಸೆಂಬರ್ 2024 ರಲ್ಲಿ ಆಗಿನ ಹಣಕಾಸು ಸ್ಥಿರತೆ ವರದಿಯ (ಎಫ್ಎಸ್ಆರ್) ಸಂಚಿಕೆಯ ಪ್ರಕಾರ, ನಿವ್ವಳ ಎನ್ಪಿಎ ಅನುಪಾತವು ಶೇಕಡಾ 0.6 ರಷ್ಟಿತ್ತು.
ಹೆಚ್ಚಿದ ಸಾಲ ಮನ್ನಾ ಮತ್ತು ಸ್ಥಿರವಾದ ಸಾಲದ ಬೇಡಿಕೆಯಿಂದಾಗಿ 37 ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ (ಎಸ್ಸಿಬಿ) ಒಟ್ಟು ಅನುತ್ಪಾದಕ ಆಸ್ತಿ (ಜಿಎನ್ಪಿಎ) ಅನುಪಾತವು ಬಹು ವರ್ಷಗಳ ಕನಿಷ್ಠ ಶೇಕಡಾ 2.6 ಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ. ಎಸ್ಸಿಬಿಗಳ ಆಸ್ತಿ ಗುಣಮಟ್ಟದಲ್ಲಿನ ಸುಧಾರಣೆಯು ವಲಯಗಳು ಮತ್ತು ಬ್ಯಾಂಕ್ ಗುಂಪುಗಳಲ್ಲಿ ಹರಡಿಕೊಂಡಿದೆ ಎಂದು ವರದಿ ತಿಳಿಸಿದೆ.
ನಿರಂತರವಾಗಿ ದೊಡ್ಡ ಸಾಲಗಾರರ ಪಾಲಿನಲ್ಲಿ ಕುಸಿತ:ವರದಿಯ ಪ್ರಕಾರ, ಬ್ಯಾಂಕುಗಳ ಜಿಎನ್ಪಿಎಯಲ್ಲಿ ದೊಡ್ಡ ಸಾಲಗಾರರ ಪಾಲು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಕಡಿಮೆಯಾಗಿದೆ. ಬ್ಯಾಂಕುಗಳ ದೊಡ್ಡ ಸಾಲಗಾರ ಪೋರ್ಟ್ ಫೋಲಿಯೊಗಳ ಆಸ್ತಿ ಗುಣಮಟ್ಟವು ಗಣನೀಯವಾಗಿ ಸುಧಾರಿಸಿದೆ ಮತ್ತು ಜಿಎನ್ಪಿಎ ಅನುಪಾತವು ಮಾರ್ಚ್ 2023 ರಲ್ಲಿ ಇದ್ದ ಶೇಕಡಾ 4.5 ರಿಂದ ಸೆಪ್ಟೆಂಬರ್ 2024 ರಲ್ಲಿ ಶೇಕಡಾ 2.4 ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.
"ದೊಡ್ಡ ಸಾಲಗಾರರ ಗುಂಪಿನಲ್ಲಿ, ಅಗ್ರ 100 ಸಾಲಗಾರರ ಪಾಲು ಸೆಪ್ಟೆಂಬರ್ 2024 ರಲ್ಲಿ ಶೇಕಡಾ 34.6 ಕ್ಕೆ ಇಳಿಕೆಯಾಗಿದೆ. ಇದು ಮಧ್ಯಮ ಗಾತ್ರದ ಸಾಲಗಾರರಿಂದ ಸಾಲದ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ" ಎಂದು ವರದಿ ಗಮನ ಸೆಳೆದಿದೆ. ವಿಶೇಷ ಎಂದರೆ, ಸೆಪ್ಟೆಂಬರ್ 2024 ರಲ್ಲಿ ಅಗ್ರ 100 ಸಾಲಗಾರರಲ್ಲಿ ಯಾರನ್ನೂ ಎನ್ಪಿಎಗಳಾಗಿ ವರ್ಗೀಕರಿಸಲಾಗಿಲ್ಲ.
ತೆರಿಗೆ ನಂತರದ ಲಾಭದಲ್ಲೂ ಏರಿಕೆ:2024-25ರ ಮೊದಲಾರ್ಧದಲ್ಲಿ ಎಸ್ಸಿಬಿಗಳ ಲಾಭದಾಯಕತೆ ಸುಧಾರಿಸಿದೆ ಹಾಗೂ ತೆರಿಗೆಯ ನಂತರದ ಲಾಭ (ಪಿಎಟಿ) ವರ್ಷದಿಂದ ವರ್ಷಕ್ಕೆ ಶೇಕಡಾ 22.2 ರಷ್ಟು ಹೆಚ್ಚಾಗಿದೆ ಎಂದು ಅದು ಹೇಳಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್ಬಿ) ಮತ್ತು ಪಿವಿಬಿಗಳು ಕ್ರಮವಾಗಿ ಶೇಕಡಾ 30.2 ಮತ್ತು ಶೇಕಡಾ 20.2 ರಷ್ಟು ಪಿಎಟಿ ಬೆಳವಣಿಗೆಯನ್ನು ದಾಖಲಿಸಿದರೆ, ವಿದೇಶಿ ಬ್ಯಾಂಕುಗಳು (ಎಫ್ಬಿಗಳು) ಏಕ ಅಂಕಿಯ ಬೆಳವಣಿಗೆಯನ್ನು (ಶೇಕಡಾ 8.9) ದಾಖಲಿಸಿವೆ.
ಬ್ಯಾಂಕುಗಳ ಸದೃಢತೆಯಲ್ಲೂ ತೀವ್ರ ಹೆಚ್ಚಳ:ಬಲವಾದ ಲಾಭದಾಯಕತೆ, ಅನುತ್ಪಾದಕ ಆಸ್ತಿಗಳ ಕುಸಿತ, ಸಾಕಷ್ಟು ಬಂಡವಾಳ ಮತ್ತು ನಗದು ಮೀಸಲುಗಳಿಂದ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ (ಎಸ್ಸಿಬಿ) ಸದೃಢತೆ ಹೆಚ್ಚಾಗಿದೆ. ರಿಟರ್ನ್ ಆನ್ ಅಸೆಟ್ಸ್ (ಆರ್ಒಎ) ಮತ್ತು ರಿಟರ್ನ್ ಆನ್ ಈಕ್ವಿಟಿ (ಆರ್ಒಇ) ದಶಕದ ಗರಿಷ್ಠ ಮಟ್ಟದಲ್ಲಿದ್ದರೆ, ಒಟ್ಟು ಅನುತ್ಪಾದಕ ಆಸ್ತಿ (ಜಿಎನ್ಪಿಎ) ಅನುಪಾತವು ಅನೇಕ ವರ್ಷಗಳ ಕನಿಷ್ಠಕ್ಕೆ ಇಳಿದಿದೆ ಎಂದು ವರದಿ ಹೇಳಿದೆ. ದೇಶೀಯ ಬ್ಯಾಂಕಿಂಗ್ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವದ ಮೌಲ್ಯಮಾಪನವನ್ನು ಒದಗಿಸುವ ಬ್ಯಾಂಕಿಂಗ್ ಸ್ಥಿರತೆ ಸೂಚಕ (ಬಿಎಸ್ಐ) 2024-25 ರ ಮೊದಲಾರ್ಧದಲ್ಲಿ ಮತ್ತಷ್ಟು ಸುಧಾರಣೆ ತೋರಿಸಿದೆ ಎಂದು ಆರ್ಬಿಐ ತಿಳಿಸಿದೆ.
ಇದನ್ನೂ ಓದಿ : RTGS, NEFT ಫಲಾನುಭವಿ ಖಾತೆಯ ಹೆಸರು ಪರಿಶೀಲನೆ ಸೌಲಭ್ಯ ಅಳವಡಿಸಿ: ಬ್ಯಾಂಕ್ಗಳಿಗೆ ಆರ್ಬಿಐ ಸೂಚನೆ - RTGS NEFT TRANSFERS