ನವದೆಹಲಿ: ಭಾರತದ ಬೆಳವಣಿಗೆಗೆ ಸಣ್ಣ ಕೈಗಾರಿಕೆಗಳ ಕೊಡುಗೆಯನ್ನು ಗುರುತಿಸಿ, ಪ್ರತಿ ವರ್ಷ ಆಗಸ್ಟ್ 30 ರಂದು ಭಾರತದಲ್ಲಿ ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನವನ್ನು ಆಚರಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗ ನೀಡುವ ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಮತ್ತು ಬೆಂಬಲಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ದಿನವು ಒಂದು ಉತ್ತಮ ಅವಕಾಶವಾಗಿದೆ.
ಇತಿಹಾಸ ಮತ್ತು ಮಹತ್ವ:2000 ರಲ್ಲಿ ಸಣ್ಣ - ಪ್ರಮಾಣದ ಕೈಗಾರಿಕೆಗಳ ಸಚಿವಾಲಯ (MSSI) ಸಣ್ಣ ವ್ಯವಹಾರಗಳನ್ನು ಸಶಕ್ತಗೊಳಿಸಲು ಸಮಗ್ರ ನೀತಿ ಪ್ಯಾಕೇಜ್ ವೊಂದನ್ನು ಪರಿಚಯಿಸಿತು. ಈ ಪ್ಯಾಕೇಜ್ ಸಣ್ಣ ಉದ್ಯಮಗಳನ್ನು ಬೆಳೆಸುವ ಗುರಿ ಹೊಂದಿತ್ತು. ಅಂದು ಕೈಗೊಂಡ ಈ ನಿರ್ಧಾರ ಹಾಗೂ ಪ್ರಯತ್ನ ಭಾರಿ ಯಶಸ್ಸು ತಂದುಕೊಟ್ಟಿತು. ಅಷ್ಟೇ ಅಲ್ಲ ಭಾರತದಾದ್ಯಂತ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡಿತು. ಈ ಯಶಸ್ಸನ್ನು ಗುರುತಿಸಿದ ಒಂದು ವರ್ಷದ ನಂತರ, ಕೇಂದ್ರ ಸರ್ಕಾರ ಆಗಸ್ಟ್ 30 ಅನ್ನು ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿತು. ಈ ದಿನವು ದೇಶದ ಬೆಳವಣಿಗೆಗೆ ಸಣ್ಣ ಕೈಗಾರಿಕೆಗಳ ಕೊಡುಗೆಯನ್ನು ಗುರುತಿಸುತ್ತದೆ. ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಮತ್ತು ಬೆಂಬಲಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಈ ದಿನದಂದು ಹೊಸದಾಗಿ ಸಣ್ಣ ಉದ್ಯಮಗಳನ್ನು ಪ್ರಾರಂಭಿಸುವುದರ ಜೊತೆಗೆ, ಸಣ್ಣ ಉದ್ಯಮಗಳ ಉತ್ಪಾದಕತೆಯನ್ನು ಸುಧಾರಿಸುವ ಮಾರ್ಗಗಳ ಕುರಿತು ಚರ್ಚೆ ಹಾಗೂ ಸಂವಾದ ನಡೆಸಲು ಅನುಕೂಲ ಮಾಡಿಕೊಟ್ಟಿದೆ.
ಸಣ್ಣ ಕೈಗಾರಿಕೆ ಎಂದರೇನು?:10 ಕೋಟಿ ರೂ.ಗಿಂತ ಹೆಚ್ಚಿಲ್ಲದ ಮತ್ತು ವಾರ್ಷಿಕ ವಹಿವಾಟು 50 ಕೋಟಿ ರೂಗಿಂತ ಹೆಚ್ಚಿರದ ಉದ್ಯಮವಾಗಿದೆ. ಸಸ್ಯ ಮತ್ತು ಯಂತ್ರೋಪಕರಣ ಅಥವಾ ಸಲಕರಣೆಗಳಲ್ಲಿ ಹೂಡಿಕೆ ಮಾಡಿರುವ ಒಲಯವಾಗಿದೆ. ಸಣ್ಣ ಕೈಗಾರಿಕೆಗಳು ಸಾಮಾನ್ಯವಾಗಿ ಉತ್ಪಾದನೆ ಅಥವಾ ಸಣ್ಣ ಪ್ರಮಾಣದಲ್ಲಿ ಸೇವೆಗಳನ್ನು ಒದಗಿಸುವುದರೊಂದಿಗೆ ಸಂಬಂಧ ಹೊಂದಿವೆ. ಈ ವ್ಯವಹಾರಗಳು ಸ್ಥಳೀಯ ಕಾರ್ಮಿಕರನ್ನು ಹೆಚ್ಚಾಗಿ ಒಳಗೊಂಡಿರುತ್ತವೆ. ನಿರುದ್ಯೋಗ ಮತ್ತು ಅರೆ ಉದ್ಯೋಗದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಈ ಸಣ್ಣ ಕೈಗಾರಿಕೆಗಳು ನಿರ್ಣಾಯಕವಾಗಿವೆ.
ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನದ ಥೀಮ್-2024:ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನ - 2024 ರ ವಿಷಯವು "ಸುಸ್ಥಿರ ಅಭಿವೃದ್ಧಿಯನ್ನು ವೇಗಗೊಳಿಸಲು ಮತ್ತು ಬಹು ಬಿಕ್ಕಟ್ಟುಗಳ ಸಮಯದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (MSMEs) ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿಯಂತ್ರಿಸುವುದಾಗಿದೆ.