ನವದೆಹಲಿ: ಭಾರತದ ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆಯು ಜುಲೈನಲ್ಲಿ ಅತಿ ಹೆಚ್ಚು 23,332 ಕೋಟಿ ರೂ.ಗಳಿಗೆ ತಲುಪಿದೆ. ಜೂನ್ನಲ್ಲಿ ಇದು 21,262 ಕೋಟಿ ರೂ. ಆಗಿತ್ತು. ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ (ಎಸ್ಐಪಿ) ಇತ್ತೀಚೆಗೆ ಹೆಚ್ಚಿನ ಬಂಡವಾಳ ಹರಿದು ಬಂದಿರುವುದರಿಂದ ಒಟ್ಟು ಮ್ಯೂಚುವಲ್ ಫಂಡ್ ಉದ್ಯಮದ ನಿರ್ವಹಣೆಯಲ್ಲಿರುವ ಸ್ವತ್ತುಗಳು (ಎಯುಎಂ) (Assets Under Management) ಜುಲೈನಲ್ಲಿ 64.69 ಲಕ್ಷ ಕೋಟಿಗೆ ತಲುಪಿದೆ.
ಎಎಂಎಫ್ಐ (ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ) ಅಂಕಿಅಂಶಗಳ ಪ್ರಕಾರ, ಈಕ್ವಿಟಿ ಫಂಡ್ಗಳಲ್ಲಿನ ಒಟ್ಟು ಒಳಹರಿವು ಕಳೆದ ತಿಂಗಳಲ್ಲಿ ಶೇಕಡಾ 8.6 ರಷ್ಟು ಕುಸಿದು 37,113.4 ಕೋಟಿ ರೂ.ಗೆ ತಲುಪಿದೆ. ಇದು ಜೂನ್ನಲ್ಲಿ 40,608.19 ಕೋಟಿ ರೂ. ಆಗಿತ್ತು. ಓಪನ್ ಎಂಡೆಡ್ ಇಕ್ವಿಟಿ ಫಂಡ್ಗಳಲ್ಲಿನ ಒಳಹರಿವು ಸತತ 41 ನೇ ತಿಂಗಳು ಏರಿಕೆಯಲ್ಲಿದೆ. ಜುಲೈನಲ್ಲಿ ಸೆನ್ಸೆಕ್ಸ್ ಶೇಕಡಾ 3.43 ಮತ್ತು ನಿಫ್ಟಿ ಶೇಕಡಾ 3.92 ರಷ್ಟು ಏರಿಕೆಯಾಗಿರುವುದು ಕೂಡ ಗಮನಾರ್ಹ.
ಚಿಲ್ಲರೆ ಹೂಡಿಕೆದಾರರು ಮ್ಯೂಚುವಲ್ ಫಂಡ್ಗಳಲ್ಲಿ ನಿರಂತರ ಹೂಡಿಕೆ ಮಾಡುತ್ತಿರುವುದರಿಂದ ಉದ್ಯಮದ ಬೆಳವಣಿಗೆಯ ದರ ಸಕಾರಾತ್ಮಕವಾಗಿದೆ ಎಂದು ಎಎಂಎಫ್ಐ ಮುಖ್ಯ ಕಾರ್ಯನಿರ್ವಾಹಕ ವೆಂಕಟ್ ಚಲಸಾನಿ ಹೇಳಿದ್ದಾರೆ. ಪ್ರಸ್ತುತ, ಮ್ಯೂಚುವಲ್ ಫಂಡ್ಗಳು ಚಿಲ್ಲರೆ ಹೂಡಿಕೆದಾರರ ಹಣಕಾಸು ಹೂಡಿಕೆಯ ಪ್ರಮುಖ ಭಾಗವಾಗಿವೆ.