ನವದೆಹಲಿ: ಗ್ರಾಹಕರಿಂದ ಸರಕುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಉತ್ಪಾದನಾ ಚಟುವಟಿಕೆಯು ಜೂನ್ನಲ್ಲಿ ವೇಗ ಪಡೆದುಕೊಂಡಿದ್ದು, ಉದ್ಯೋಗ ನೇಮಕಾತಿಗಳು 19 ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟಕ್ಕೆ ತಲುಪಿವೆ ಎಂದು ಸೋಮವಾರ ಬಿಡುಗಡೆಯಾದ ಎಚ್ಎಸ್ಬಿಸಿಯ ಭಾರತ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ವರದಿ ಹೇಳಿದೆ.
"ಭಾರತೀಯ ಉತ್ಪಾದನಾ ವಲಯವು ಜೂನ್ ತ್ರೈಮಾಸಿಕವನ್ನು ಬಲವಾದ ನೆಲೆಗಟ್ಟಿನಲ್ಲಿ ಕೊನೆಗೊಳಿಸಿತು. ಉತ್ಪಾದನಾ ಪಿಎಂಐ ಜೂನ್ನಲ್ಲಿ ಶೇಕಡಾ 0.8ರಷ್ಟು ಏರಿಕೆಯಾಗಿ 58.3ಕ್ಕೆ ತಲುಪಿದೆ" ಎಂದು ಎಚ್ಎಸ್ಬಿಸಿಯ ಜಾಗತಿಕ ಅರ್ಥಶಾಸ್ತ್ರಜ್ಞ ಮೈತ್ರೇಯಿ ದಾಸ್ ಹೇಳಿದ್ದಾರೆ.
ಸೂಚ್ಯಂಕಕ್ಕಾಗಿ ಸಮೀಕ್ಷೆ ನಡೆಸಿದ 400 ಸಂಸ್ಥೆಗಳು ಮತ್ತೊಂದು ತಿಂಗಳಿಗಾಗಿ ಹೊಸ ರಫ್ತು ಆದೇಶಗಳನ್ನು ಪಡೆದುಕೊಂಡಿರುವುದರಿಂದ ಹಿಂದಿನ ವರ್ಷಕ್ಕೆ ಹೋಲಿಸಿದರೆ ರಫ್ತು ಬೆಳವಣಿಗೆಯು ಉತ್ತಮವಾಗಿರಲಿದೆ. ಏಷ್ಯಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಯುರೋಪ್ ಮತ್ತು ಯುಎಸ್ ದೇಶಗಳಿಗೆ ಭಾರತದಿಂದ ರಫ್ತು ಪ್ರಮಾಣ ಹೆಚ್ಚಾಗಲಿದೆ ಎಂದು ವರದಿ ಹೇಳಿದೆ.
"ಉತ್ಪಾದನಾ ವಲಯದ ದೃಷ್ಟಿಕೋನವು ಸಕಾರಾತ್ಮಕವಾಗಿದೆ. ಸುಮಾರು 29 ಪ್ರತಿಶತದಷ್ಟು ಪ್ಯಾನೆಲಿಸ್ಟ್ಗಳು ಮುಂಬರುವ ವರ್ಷದಲ್ಲಿ ಉತ್ಪಾದನೆಯ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದಾರೆ. ಮುಂಬರುವ ವರ್ಷದಲ್ಲಿ ಬೇಡಿಕೆ ಮತ್ತು ಆರ್ಡರ್ ಬುಕ್ಗಳ ಪರಿಮಾಣಗಳಲ್ಲಿ ಮತ್ತಷ್ಟು ಹೆಚ್ಚಳವಾಗಬಹುದು ಎಂದು ಕಂಪನಿಗಳು ನಿರೀಕ್ಷಿಸಿವೆ. ಆದಾಗ್ಯೂ, ಒಟ್ಟಾರೆ ವಿಶ್ವಾಸದ ಮಟ್ಟವು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ" ಎಂದು ಎಸ್&ಪಿ ಗ್ಲೋಬಲ್ ಹೇಳಿದೆ.