ನವದೆಹಲಿ:ಸನಾತನ ಧರ್ಮದ ಐತಿಹಾಸಿಕ ಉತ್ಸವ ಮಹಾ ಕುಂಭಮೇಳದ ಆತಿಥ್ಯ ವಹಿಸಿರುವ ಉತ್ತರ ಪ್ರದೇಶದ 'ಪ್ರಯಾಗ್ರಾಜ್' ಕಂಡುಕೇಳರಿಯದ ಆರ್ಥಿಕ ವ್ಯವಹಾರ ನಡೆಸಿ ದಾಖಲೆ ನಿರ್ಮಿಸಿದೆ.
45 ದಿನ ನಡೆಯುವ ಕುಂಭಮೇಳದಲ್ಲಿ 38 ದಿನಗಳಲ್ಲೇ 3 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ವ್ಯವಹಾರ ನಡೆಸಿದೆ. ಇದು 2024-25ರ ಕರ್ನಾಟಕ ರಾಜ್ಯ ಬಜೆಟ್ನ (3.70 ಲಕ್ಷ ಕೋಟಿ ರೂ) ಗಾತ್ರ ಮತ್ತು 2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ರಕ್ಷಣಾ ವಲಯಕ್ಕೆ(6.81 ಲಕ್ಷ ಕೋಟಿ ರೂ) ಮೀಸಲಿಟ್ಟ ಅನುದಾನದಲ್ಲಿ ಅರ್ಧಭಾಗವಾಗಿದೆ.
ಈ ಬಗ್ಗೆ ಬುಧವಾರ ಮಾಹಿತಿ ಹಂಚಿಕೊಂಡಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (CAIT) ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, "ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಉತ್ಸವದಲ್ಲಿ ಸರಕು ಮತ್ತು ಸೇವೆಗಳ ಮೂಲಕ 3 ಲಕ್ಷ ಕೋಟಿ ರೂಪಾಯಿ (360 ಬಿಲಿಯನ್ ಅಮೆರಿಕನ್ ಡಾಲರ್)ಗಿಂತ ಹೆಚ್ಚಿನ ವ್ಯವಹಾರವನ್ನು ಗಳಿಸಿದೆ. ಇದು ಭಾರತದ ಅತಿದೊಡ್ಡ ಆರ್ಥಿಕ ಕಾರ್ಯಕ್ರಮಗಳಲ್ಲಿ ಒಂದು" ಎಂದು ಹೇಳಿದರು.
"144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾ ಕುಂಭಮೇಳವು ಜನವರಿ 13ರಿಂದ ಆರಂಭವಾಗಿದೆ. ಕಳೆದ 38 ದಿನಗಳಲ್ಲಿ 3 ಲಕ್ಷ ಕೋಟಿ ರೂಪಾಯಿಯಷ್ಟು ಅಗಾಧವಾದ ಆರ್ಥಿಕ ವ್ಯವಹಾರವಾಗಿದೆ. ಪ್ರಯಾಗ್ರಾಜ್ಗೆ ಈವರೆಗೂ 56 ಕೋಟಿಗೂ ಅಧಿಕ ಜನರು ಭೇಟಿ ನೀಡಿದ್ದಾರೆ" ಎಂದು ಅವರು ಅಂಕಿಅಂಶ ನೀಡಿದರು.
ವಿಶ್ವದ ಅತಿದೊಡ್ಡ ಮಾನವ ಉತ್ಸವ:"ಮಹಾ ಕುಂಭಮೇಳವು ವಿಶ್ವದಲ್ಲಿಯೇ ನಡೆದ ಅತಿದೊಡ್ಡ ಮಾನವ ಉತ್ಸವವಾಗಿದೆ. ನಂಬಿಕೆ ಮತ್ತು ಆರ್ಥಿಕತೆಯ ನಡುವಿನ ಸಂಪರ್ಕವಾಗಿದೆ. ಡೈರಿಗಳು, ಕ್ಯಾಲೆಂಡರ್‌ಗಳು, ಸೆಣಬಿನ ಚೀಲಗಳು ಮತ್ತು ಲೇಖನ ಸಾಮಗ್ರಿಗಳಂತಹ ಉತ್ಪನ್ನಗಳ ಮಾರಾಟದಿಂದ ಸ್ಥಳೀಯ ವ್ಯಾಪಾರಕ್ಕೆ ಜೀವಕಳೆ ಬಂದಿದೆ" ಎಂದರು.
ಮಹಾ ಕುಂಭಮೇಳ: ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಸೇರಿದ ಭಕ್ತರು (ETV Bharat) "ಉತ್ತರ ಪ್ರದೇಶದ ಆರ್ಥಿಕತೆಗೆ ಗಮನಾರ್ಹ ಉತ್ತೇಜನ ನೀಡಿದೆ. ಹೊಸ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸಿದೆ. ಆತಿಥ್ಯ, ವಸತಿ, ಆಹಾರ, ನೀರು, ಸಾರಿಗೆ, ಸಾಗಣೆ, ಧಾರ್ಮಿಕ ಉಡುಪು, ಪೂಜಾ ಸಾಮಗ್ರಿ, ಕರಕುಶಲ ವಸ್ತುಗಳು, ಜವಳಿ, ಆರೋಗ್ಯ, ಮಾಧ್ಯಮ, ಜಾಹೀರಾತು, ಮನರಂಜನೆ, ನಾಗರಿಕ ಸೇವೆಗಳಾದ ಟೆಲಿಕಾಂ, ಮೊಬೈಲ್, ಎಐ ಆಧಾರಿತ ತಂತ್ರಜ್ಞಾನ, ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ಉಪಕರಣಗಳು ಸೇರಿದಂತೆ ಹಲವಾರು ವ್ಯಾಪಾರ ವಲಯಗಳು ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆ ನಡೆಸಿವೆ" ಎಂದು ಖಂಡೇಲ್ವಾಲ್ ತಿಳಿಸಿದರು.
ಪ್ರಯಾಗದ 150 ಕಿ.ಮೀ ವ್ಯಾಪ್ತಿಯಲ್ಲಿ ವ್ಯಾಪಾರ:ಪ್ರಯಾಗ್ರಾಜ್ ಮಾತ್ರವಲ್ಲದೇ, ಅದರ 150 ಕಿ.ಮೀ ವ್ಯಾಪ್ತಿಯಲ್ಲಿ ಗಮನಾರ್ಹ ವ್ಯಾಪಾರ ಕಂಡುಬಂದಿದೆ. ಮಹಾ ಕುಂಭಮೇಳದಲ್ಲಿ ಮಿಂದೇಳಲು ಬಂದ ಭಕ್ತರು ಅಯೋಧ್ಯೆ, ಕಾಶಿ, ವಾರಾಣಸಿ ಸೇರಿದಂತೆ ಸುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಇದು ಸ್ಥಳೀಯ ಆರ್ಥಿಕತೆಗೆ ಬಲ ತುಂಬಿದೆ ಎಂದು ವಿಶ್ಲೇಷಿಸಲಾಗಿದೆ.
ಮಹಾಕುಂಭ ಆರಂಭಕ್ಕೂ ಮುನ್ನ, 40 ಕೋಟಿ ಭಕ್ತರ ಆಗಮನ ಮತ್ತು ಸುಮಾರು 2 ಲಕ್ಷ ಕೋಟಿ ರೂಪಾಯಿಗಳ ವ್ಯಾಪಾರ-ವಹಿವಾಟು ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ನಿರೀಕ್ಷೆಗಳು ಮೀರಿದ ಭಕ್ತರು ಆಗಮಿಸುತ್ತಿದ್ದಾರೆ. ಕುಂಭಮೇಳವು ಫೆಬ್ರವರಿ 26ರಂದು ಸಂಪನ್ನವಾಗಲಿದ್ದು, ಸುಮಾರು 60 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದು ಮತ್ತಷ್ಟು ಕೋಟಿಗಳ ವ್ಯಾಪಾರ ವಹಿವಾಟಿಗೆ ಸಾಕ್ಷಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಸರ್ಕಾರ ಖರ್ಚು ಮಾಡಿದ್ದೆಷ್ಟು?:ಪ್ರಯಾಗ್‌ರಾಜ್‌ನಲ್ಲಿ ಮೂಲಸೌಕರ್ಯಗಳ ವ್ಯವಸ್ಥೆಗೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು 7,500 ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಿದೆ. ಇದರಲ್ಲಿ ಫ್ಲೈಓವರ್‌ಗಳು, ರಸ್ತೆಗಳು, ಅಂಡರ್‌ಪಾಸ್‌ಗಳು, ಘಾಟ್ಗಳನ್ನು ನಿರ್ಮಿಸಲಾಗಿದೆ. ಮಹಾಕುಂಭಕ್ಕಾಗಿಯೇ 1,500 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಇದನ್ನೂ ಓದಿ:ಮಹಾ ಕುಂಭಮೇಳ: ಶಿವಮೊಗ್ಗದಿಂದ ಪ್ರಯಾಗ್ರಾಜ್ಗೆ ವಿಶೇಷ ನೇರ ರೈಲು
ಮಹಾ ಕುಂಭಮೇಳಕ್ಕೆ ತೆರಳಲು ಮೈಸೂರಿನಿಂದ ಲಕ್ನೋ, ತುಂಡ್ಲಾಕ್ಕೆ ವಿಶೇಷ ಎಕ್ಸ್ಪ್ರೆಸ್ ರೈಲು