ಹೈದರಾಬಾದ್:ಹೂಡಿಕೆ, ಅದರಿಂದ ಸಂಪತ್ತು ವೃದ್ಧಿಯು ದೀರ್ಘಕಾಲ ತೆಗೆದುಕೊಳ್ಳುವ ಪ್ರಕ್ರಿಯೆ. ಹಣಕಾಸಿನ ಅಗತ್ಯಗಳು ಎಲ್ಲರಿಗೂ ಒಂದೇ ತೆರನಾಗಿ ಇರುವುದಿಲ್ಲ. ಅವಶ್ಯಕತೆಗಳು ಇತರರಿಗಿಂತ ಭಿನ್ನವಾಗಿದ್ದರೂ, ಹೂಡಿಕೆಯ ಕೆಲವು ಅಂಶಗಳನ್ನು ಅನುಸರಿಸಬೇಕು. ಆರ್ಥಿಕ ಭದ್ರತೆಗಾಗಿ ಪ್ರತಿಯೊಬ್ಬರೂ ಹಣಕಾಸಿನ ವ್ಯವಹಾರಗಳನ್ನು ಮುಂಚಿತವಾಗಿ ಯೋಜಿಸಬೇಕು. ಹಣಕಾಸಿನ ಗುರಿಗಳನ್ನು ಸಾಧಿಸಲು ನೀವು ವಿವಿಧ ವಿಧಾನಗಳಲ್ಲಿ ಹೂಡಿಕೆ ಮಾಡಬೇಕು. ಅದರಲ್ಲೂ ನಿಮ್ಮ ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಮಾಡಬೇಕು.
20 - 30 ವರ್ಷಗಳ ನಡುವೆ:ಹಣದ ವೃದ್ಧಿಗೆ ಹೂಡಿಕೆಯೊಂದೇ ದಾರಿ. ಇದರ ಜೊತೆಗೆ ಆರ್ಥಿಕ ಶಿಸ್ತು ಕೂಡ ಬಹಳ ಮುಖ್ಯ. ನೀವು 20-30 ವರ್ಷಗಳಲ್ಲಿ ಗಳಿಕೆ ಆರಂಭಿಸಿದ್ದರೆ, ರಿಸ್ಕ್ ಇರುವ ಮತ್ತು ಉತ್ತಮ ಲಾಭ ತಂದುಕೊಡುವ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಆದರೆ, ನಿಮ್ಮ ಹೂಡಿಕೆ ಪೋರ್ಟ್‌ಫೋಲಿಯೊದಲ್ಲಿ ಈಕ್ವಿಟಿ ಅನುಪಾತವು ಹೆಚ್ಚಿರುವುದನ್ನು ಖಚಿತಪಡಿಸಿಕೊಳ್ಳಿ. ಈ ವಯೋಮಾನದವರಿಗೆ ಆದಾಯ ಕಡಿಮೆಯಾದ್ದರಿಂದ ಖರ್ಚು ಮತ್ತು ಜವಾಬ್ದಾರಿಗಳೂ ಕಡಿಮೆಯೇ. ಹೀಗಾಗಿ, ನೀವು ರಿಸ್ಕ್ ತೆಗೆದುಕೊಳ್ಳುವುದು ಒಳಿತು. ಹೂಡಿಕೆಯ 80 ಪ್ರತಿಶತದಷ್ಟು ಹಣವನ್ನು ಈಕ್ವಿಟಿಗಳಿಗೆ ಹಂಚಿಕೆ ಮಾಡುವುದು ಉತ್ತಮ. ಇಪಿಎಫ್ ಮತ್ತು ಪಿಪಿಎಫ್‌ನಂತಹ ಸರ್ಕಾರಿ ಬೆಂಬಲಿತ ಉಳಿತಾಯ ಯೋಜನೆಗಳಲ್ಲಿ ಶೇ.15ರಷ್ಟು ಹೂಡಿಕೆ ಮಾಡಿ. ಶೇ.5 ರಷ್ಟು ಹಣವನ್ನು ತುರ್ತು ನಿಧಿಯಾಗಿ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇಟ್ಟುಕೊಳ್ಳಿ. ಅಲ್ಲದೇ, ನೀವು ವಿದ್ಯಾರ್ಥಿಯಾಗಿದ್ದಾಗ ಶಿಕ್ಷಣ ಸಾಲವನ್ನು ತೆಗೆದುಕೊಂಡರೆ, ಅದನ್ನು ಮರುಪಾವತಿಸಲು ನೀವು ಅದಕ್ಕೆ ಅನುಗುಣವಾಗಿ ಯೋಜಿಸಬೇಕು.
30-40 ರ ವಯಸ್ಸಿನಲ್ಲಿ ಹೂಡಿಕೆ:ಈ ವಯಸ್ಸಿನ ಜನರು ಶೇಕಡಾ 60-70 ಈಕ್ವಿಟಿ ಅನುಪಾತ ಕಾಯ್ದುಕೊಳ್ಳಬಹುದು. 30 ರಿಂದ 40 ವಯಸ್ಸು ನಿವೃತ್ತಿ ಯೋಜನೆಯನ್ನು ಪ್ರಾರಂಭಿಸಲು ಉತ್ತಮ ಸಮಯ. ಇದಕ್ಕಾಗಿ ಎನ್‌ಪಿಎಸ್ ಯೋಜನೆಯನ್ನು ಆರಿಸಿಕೊಳ್ಳಿ. ಈ ವಯಸ್ಸಿನ ಅನೇಕ ಜನರು ಸ್ವಂತ ಮನೆ ನಿರ್ಮಿಸಲು ಬಯಸುತ್ತಾರೆ. ಬ್ಯಾಂಕ್‌ನಿಂದ ಸಾಲ ಪಡೆದು ಮನೆಯಲ್ಲಿ ಹೂಡಿಕೆ ಮಾಡುವುದು ಕೂಡ ಒಳ್ಳೆಯದು. 20 ಪ್ರತಿಶತದಷ್ಟು ಡೌನ್ ಪೇಮೆಂಟ್ ಅನ್ನು ಪಾವತಿಸುವುದು, 20 ವರ್ಷಗಳವರೆಗೆ EMI ನಲ್ಲಿ ಹೂಡಿಕೆ ಮಾಡುವುದು ಉತ್ತಮ. ನಿಮ್ಮ ಹೆಚ್ಚಿನ ಆದಾಯವು ಮನೆಯ EMI ಗೆ ಹೋಗುತ್ತದೆ.