ಪ್ರವಾಸ, ಟ್ರಿಪ್ ಉತ್ಸಾಹವನ್ನು ಹೆಚ್ಚಿಸುತ್ತದೆ. ವಿದೇಶ ಪ್ರಯಾಣವಂತೂ ಎಲ್ಲಿಲ್ಲದ ಸಂತೋಷದ ತರುತ್ತೆ. ಬೇರೊಂದು ದೇಶಕ್ಕೆ ಹೋಗಿ ಬರುವುದು ಸವಾಲಿನ ಜೊತೆಗೆ ರೋಮಾಂಚಕ ಅನುಭವ. ಅಂತಹ ಪ್ರವಾಸದಲ್ಲಿ ಹಲವು ಅಡೆತಡೆಗಳು, ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಹಣಕಾಸಿನ ತೊಂದರೆಗಳು, ಇತರ ಅಡ್ಡಿಗಳನ್ನು ತಪ್ಪಿಸಲು ಮುಂಚಿತವಾಗಿ ಯೋಜಿಸುವುದು ಅತ್ಯಗತ್ಯ. ಅಂತಹ ಸುಗಮ ವಿದೇಶ ಪ್ರವಾಸ ಮಾಡುವುದು ಹೇಗೆ ಎಂಬ ಬಗ್ಗೆ ಒಂದಷ್ಟು ಸಲಹೆಗಳು ಇಲ್ಲಿವೆ.
ಉತ್ತಮ ಹವಾಮಾನ ಮತ್ತು ಆಕರ್ಷಕ ತಾಣಗಳನ್ನು ಇಷ್ಟಪಡುವ ಪ್ರವಾಸಿಗರಿಗೆ ಯುರೋಪ್, ಅಮೇರಿಕಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಅತ್ಯುತ್ತಮ ಆಯ್ಕೆಗಳಾಗಿವೆ. ವಿದೇಶ ಪ್ರವಾಸದ ವೇಳೆ ನೀವು ಪರಿಗಣಿಸಬೇಕಾದ ಪ್ರಮುಖ ವಿಷಯವೆಂದರೆ, ನಿಮ್ಮ ಆಸಕ್ತಿಯ ಆಧಾರದ ಮೇಲೆ ನೀವು ಭೇಟಿ ನೀಡುವ ಸ್ಥಳಗಳನ್ನು ಮೊದಲೇ ಆಯ್ಕೆ ಮಾಡಿಕೊಳ್ಳಬೇಕು. ಇದು ನಿಮ್ಮಲ್ಲಿನ ಬಜೆಟ್‌ಗೆ ಅನುಗುಣವಾಗಿಬೇಕು. ವಿಮಾನ ಪ್ರಯಾಣ, ವಸತಿ, ಊಟ, ಇತರ ಚಟುವಟಿಕೆಗಳು, ಪ್ರಯಾಣ ವಿಮೆ ಮತ್ತು ವೀಸಾಗಳಂತಹ ವೆಚ್ಚಗಳನ್ನು ಒಳಗೊಂಡಿರುವ ವಿವರವಾದ ಬಜೆಟ್ ಅನ್ನು ಮೊದಲೇ ರೂಪಿಸಿಕೊಳ್ಳಬೇಕು.
ಖರ್ಚುಗಳ ಬಗ್ಗೆ ಎಚ್ಚರ:ವಿದೇಶ ಪ್ರವಾಸದ ವೇಳೆ ದುಬಾರಿ ಖರ್ಚು ಸಹಜ. ಅದರಲ್ಲೂ ವೆಚ್ಚದ ಹೆಚ್ಚಿನ ಪಾಲು ವಿಮಾನ ಟಿಕೆಟ್‌ಗಳಿಗೇ ಹೋಗುತ್ತದೆ. ಹೀಗಿದ್ದಾಗ ನೀವು ವಿಶ್ವಾಸಾರ್ಹ ಪ್ರಯಾಣ ವೆಬ್‌ಸೈಟ್‌ಗಳನ್ನು ಮಾತ್ರ ಬಳಸಿ. ಅವುಗಳಲ್ಲಿ ನೀವು ಬಯಸಿದ ವಿಮಾನಗಳನ್ನು ಹುಡುಕಿ ಆಯ್ದುಕೊಳ್ಳಿ ಅಥವಾ ಆಕರ್ಷಕ ಆಫರ್ಗಳಿಗಾಗಿ ಟ್ರಾವೆಲ್ ಏಜೆಂಟ್‌ಗಳನ್ನು ಸಂಪರ್ಕಿಸಿ.
ಕೆಲ ವಿಶೇಷ ದಿನಗಳಲ್ಲಿ ಪ್ರಯಾಣದ ವಿಮಾನ ದರ ಕಡಿಮೆ ಇರುತ್ತದೆ. ಅಂತಹ ದಿನಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಮುಂಚಿತವಾಗಿ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದರೆ, ಕಡಿಮೆ ದರದಲ್ಲಿ ಪಡೆಯಬಹುದು. ಕೊನೆಯ ಕ್ಷಣದಲ್ಲಿ ಬುಕಿಂಗ್ ಮಾಡಿದರೆ ತುಸು ದುಬಾರಿಯಲ್ಲದೇ, ಟಿಕೆಟ್‌ಗಳ ಸಿಗುವ ಚಾನ್ಸ್ ಕಡಿಮೆ ಇರುತ್ತದೆ. ನೀವು ಕನೆಕ್ಟಿಂಗ್ ಫ್ಲೈಟ್‌ಗಳನ್ನು ಬುಕ್ ಮಾಡುತ್ತಿದ್ದರೆ, ಲೇಓವರ್ ಸಮಯವನ್ನು ಪರಿಗಣಿಸಿ. ವಿವಿಧ ವಿಮಾನಯಾನ ಸಂಸ್ಥೆಗಳ ಬೆಲೆಗಳನ್ನು ಪರಿಶೀಲಿಸಿ ಕಡಿಮೆ ಯಾವುದಿದೆ ಎಂಬುದು ತಿಳಿದುಕೊಳ್ಳಿ.
ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ:ನಿಮ್ಮ ಪ್ರಯಾಣ ವೆಚ್ಚವನ್ನು ಕಡಿಮೆ ಮಾಡಲು ಕ್ರೆಡಿಟ್ ಕಾರ್ಡ್‌ಗಳು ನಿಮಗೆ ಹೆಚ್ಚಿನ ಸಹಾಯ ಮಾಡುತ್ತವೆ. ವಿದೇಶಿ ವಹಿವಾಟು ಶುಲ್ಕಗಳು, ಕರೆನ್ಸಿ ವಿನಿಮಯ ಅಥವಾ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಆಫರ್ಗಳನ್ನು ನೀಡುವ ಕ್ರೆಡಿಟ್ ಕಾರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ವಿಮಾನ, ಹೋಟೆಲ್, ಇತರ ಪ್ರಯಾಣ ಸಂಬಂಧಿತ ವೆಚ್ಚಗಳಿಗಾಗಿ ಈ ಕಾರ್ಡ್ಗಳನ್ನೇ ಬಳಸಿ. ಇವುಗಳು ನಿಮ್ಮ ಒಟ್ಟಾರೆ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಸಾಧ್ಯತೆ ಹೆಚ್ಚು.
ಮೊದಲೇ ಕಾಯ್ದಿರಿಸಿ:ನೀವು ಉಳಿದುಕೊಳ್ಳಲು ಇಚ್ಛಿಸುವ ಹೋಟೆಲ್‌ಗಳು, ಹಾಸ್ಟೆಲ್‌ಗಳು ಮತ್ತು ಸರ್ವಿಸ್ ಅಪಾರ್ಟ್‌ಮೆಂಟ್‌ಗಳನ್ನು ಮೊದಲೇ ಹುಡುಕಿ ಆಯ್ದುಕೊಳ್ಳಿ. ಮುಂಚಿತವಾಗಿ ಬುಕಿಂಗ್ ಮಾಡಿದರೆ, ಕಡಿಮೆ ದರದಲ್ಲಿ ವಸತಿ ಲಭ್ಯವಿರಲಿದೆ. ಅಪಾಯಕಾರಿ ಪ್ರದೇಶಗಳಿಂದ ದೂರವಿರಿ.