ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲು ಏಪ್ರಿಲ್ 19ರ ವೇಳೆಗೆ 2.83 ಬಿಲಿಯನ್ ಡಾಲರ್ ಇಳಿಕೆಯಾಗಿ 640.33 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. ಎಂಟು ವಾರಗಳ ಕಾಲ ಸ್ಥಿರವಾಗಿ ಏರಿದ ನಂತರ ಮೊದಲ ಬಾರಿಗೆ ಏಪ್ರಿಲ್ 12 ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹ 5.4 ಬಿಲಿಯನ್ ಡಾಲರ್ ಇಳಿದು 643.16 ಬಿಲಿಯನ್ ಡಾಲರ್ಗೆ ತಲುಪಿದೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ವಿದೇಶಿ ಕರೆನ್ಸಿ ಸ್ವತ್ತುಗಳು (ಎಫ್ಸಿಎಗಳು) 3.79 ಬಿಲಿಯನ್ ಡಾಲರ್ನಿಂದ 560.86 ಬಿಲಿಯನ್ ಡಾಲರ್ಗೆ ಇಳಿಕೆಯಾಗಿದ್ದು, ವಿದೇಶಿ ವಿನಿಮಯ ಸಂಗ್ರಹದ ಭಾಗವಾಗಿರುವ ಚಿನ್ನದ ಮೀಸಲು 1.01 ಬಿಲಿಯನ್ ಡಾಲರ್ ಏರಿಕೆಯಾಗಿ 56.81 ಬಿಲಿಯನ್ ಡಾಲರ್ಗೆ ತಲುಪಿದೆ.
ತೈಲ ಬೆಲೆಗಳು ಹೆಚ್ಚುತ್ತಿರುವುದರಿಂದ ಭಾರತೀಯ ಕರೆನ್ಸಿ ದುರ್ಬಲಗೊಂಡಿದೆ. ಇನ್ನು ಆಮದುಗಳು ದುಬಾರಿಯಾಗಿರುವುದರಿಂದ ಹಾಗೂ ಇದಕ್ಕೆ ಡಾಲರ್ ನೀಡಬೇಕಾಗುವುದರಿಂದ ಡಾಲರ್ ಬೇಡಿಕೆ ಹೆಚ್ಚಾಗುತ್ತಿದೆ.
ರೂಪಾಯಿಯ ಚಂಚಲತೆಯನ್ನು ನಿಗ್ರಹಿಸಲು ಆರ್ಬಿಐ ಸಕ್ರಿಯವಾಗಿ ಡಾಲರ್ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುವುದು ವಿದೇಶಿ ಕರೆನ್ಸಿ ಸ್ವತ್ತುಗಳ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾಗಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ನಡುವೆ ಕೇಂದ್ರ ಬ್ಯಾಂಕುಗಳು ಇತ್ತೀಚಿನ ತಿಂಗಳುಗಳಲ್ಲಿ ಸುರಕ್ಷಿತ ಹೂಡಿಕೆ ಮಾರ್ಗವಾಗಿ ಚಿನ್ನವನ್ನು ಖರೀದಿಸುತ್ತಿವೆ.