ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲು ಮಾರ್ಚ್ 15ಕ್ಕೆ ಕೊನೆಗೊಂಡ ವಾರದಲ್ಲಿ 6.4 ಬಿಲಿಯನ್ ಡಾಲರ್ ಏರಿಕೆಯಾಗಿ 642.5 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ಆರ್ಬಿಐ ಶುಕ್ರವಾರ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ - ಅಂಶಗಳು ತಿಳಿಸಿವೆ. ಅಲ್ಲಿಗೆ ಸತತ ಮೂರನೇ ವಾರ ದೇಶದ ವಿದೇಶಿ ವಿನಿಮಯ ಸಂಗ್ರಹದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗಿದೆ.
ಮಾರ್ಚ್ 8 ಕ್ಕೆ ಕೊನೆಗೊಂಡ ವಾರದಲ್ಲಿ, ಭಾರತದ ವಿದೇಶಿ ವಿನಿಮಯ ಮೀಸಲು 10.47 ಬಿಲಿಯನ್ ಡಾಲರ್ ಏರಿಕೆಯಾಗಿ ಎರಡು ವರ್ಷಗಳ ಗರಿಷ್ಠ 636.1 ಬಿಲಿಯನ್ ಡಾಲರ್ಗೆ ತಲುಪಿದೆ. ಮಾರ್ಚ್ 15 ಕ್ಕೆ ಕೊನೆಗೊಂಡ ವಾರದಲ್ಲಿ ಡಾಲರ್ ವಿರುದ್ಧ ರೂಪಾಯಿಯ ಶೇಕಡಾ 0.1 ರಷ್ಟು ಅಲ್ಪ ಕುಸಿತದ ಹೊರತಾಗಿಯೂ, ಕರೆನ್ಸಿ ಶುಕ್ರವಾರ ದಾಖಲೆಯ ಕನಿಷ್ಠ 83.4250 ಕ್ಕೆ ಸ್ಥಿರವಾಯಿತು.
ಹಾಗೆಯೇ ಫೆಬ್ರವರಿ ಕೊನೆಯ ವಾರದಲ್ಲಿ, ದೇಶದ ವಿದೇಶಿ ವಿನಿಮಯ ಮೀಸಲು 6.55 ಬಿಲಿಯನ್ ಡಾಲರ್ ಏರಿಕೆಯಾಗಿ 625.63 ಬಿಲಿಯನ್ ಡಾಲರ್ಗೆ ತಲುಪಿತ್ತು. ಹೆಚ್ಚುತ್ತಿರುವ ವಿದೇಶಿ ವಿನಿಮಯ ಮೀಸಲು ಆರ್ಥಿಕತೆಗೆ ಸಕಾರಾತ್ಮಕವಾಗಿದೆ. ಡಾಲರ್ಗಳ ಸಂಗ್ರಹದಿಂದ ರೂಪಾಯಿ ಮೌಲ್ಯ ವೃದ್ಧಿಸಲು ಪೂರಕವಾಗಲಿದೆ.
ಫೆಬ್ರವರಿಯಲ್ಲಿ ರಫ್ತು 11 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದ ಮಧ್ಯೆ ಮತ್ತು ವ್ಯಾಪಾರ ಕೊರತೆ ಕಡಿಮೆಯಾಗಿರುವ ಮಧ್ಯೆ ವಿದೇಶಿ ವಿನಿಮಯ ಮೀಸಲು ಹೆಚ್ಚಾಗಿರುವುದು ಕೂಡ ಆರ್ಥಿಕತೆಗೆ ಒಳ್ಳೆಯ ಸುದ್ದಿಯಾಗಿದೆ. ಇದು ದೇಶದ ಬಾಹ್ಯ ಸಮತೋಲನ ಬಲವಾಗುತ್ತಿರುವುದನ್ನು ಸೂಚಿಸುತ್ತದೆ.
ವಿದೇಶಿ ವಿನಿಮಯ ಮೀಸಲು (ಎಫ್ಎಕ್ಸ್ ಮೀಸಲುಗಳು) ರಾಷ್ಟ್ರದ ಕೇಂದ್ರ ಬ್ಯಾಂಕ್ ಅಥವಾ ವಿತ್ತೀಯ ಪ್ರಾಧಿಕಾರದಿಂದ ಹೊಂದಿರುವ ಸ್ವತ್ತುಗಳಾಗಿವೆ. ಇದನ್ನು ಮೀಸಲು ಕರೆನ್ಸಿಗಳಲ್ಲಿ ಸಾಮಾನ್ಯವಾಗಿ ಯುಎಸ್ ಡಾಲರ್ ಮತ್ತು ಸ್ವಲ್ಪ ಮಟ್ಟಿಗೆ ಯುರೋ, ಜಪಾನೀಸ್ ಯೆನ್ ಮತ್ತು ಪೌಂಡ್ ಸ್ಟರ್ಲಿಂಗ್ ನಲ್ಲಿ ಇರಿಸಲಾಗುತ್ತದೆ.
ಸಾಂಪ್ರದಾಯಿಕವಾಗಿ ವಿದೇಶಿ ವಿನಿಮಯವು ವಿದೇಶಿ ಬ್ಯಾಂಕ್ ನೋಟುಗಳು, ವಿದೇಶಿ ಖಜಾನೆ ಬಿಲ್ ಗಳು, ವಿದೇಶಿ ಬ್ಯಾಂಕ್ ಠೇವಣಿಗಳು ಮತ್ತು ದೀರ್ಘ ಮತ್ತು ಅಲ್ಪಾವಧಿಯ ವಿದೇಶಿ ಸರ್ಕಾರಿ ಸೆಕ್ಯುರಿಟಿಗಳನ್ನು ಮಾತ್ರ ಒಳಗೊಂಡಿರಬೇಕು. ಆದರೆ, ಪ್ರಾಯೋಗಿಕವಾಗಿ, ಇದು ಚಿನ್ನದ ನಿಕ್ಷೇಪಗಳು, ಐಎಂಎಫ್ ಮೀಸಲುಗಳು ಮತ್ತು ಎಸ್ಡಿಆರ್ಗಳು ಅಥವಾ ವಿಶೇಷ ಡ್ರಾಯಿಂಗ್ ಹಕ್ಕುಗಳನ್ನು ಸಹ ಒಳಗೊಂಡಿದೆ.
ಇದನ್ನೂ ಓದಿ : ತೆರಿಗೆ ಉಳಿತಾಯಕ್ಕೆ 10 ಬೆಸ್ಟ್ ಹೂಡಿಕೆ ವಿಧಾನಗಳು ಇಲ್ಲಿವೆ ನೋಡಿ - Tax saving