ನವದೆಹಲಿ:ಭಾರತದ ಹಣಕಾಸು ಉಳಿತಾಯ ಪ್ರಮಾಣವು ಜಾಗತಿಕ ಸರಾಸರಿಯನ್ನು ಮೀರಿದೆ ಎಂದು ಎಸ್ಬಿಐ ವರದಿ ಸೋಮವಾರ ತಿಳಿಸಿದೆ. ದೇಶದ ಶೇ 80ಕ್ಕೂ ಹೆಚ್ಚು ವಯಸ್ಕರು ಈಗ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಆರ್ಥಿಕ ಸೇರ್ಪಡೆ ಹೆಚ್ಚಾಗಿದೆ ಹಾಗೂ ಆ ಮೂಲಕ ಉಳಿತಾಯ ಪ್ರಮಾಣವೂ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಭಾರತದ ಉಳಿತಾಯ ಪ್ರಮಾಣವು ಶೇ 30.2ರಷ್ಟಿದ್ದು, ಇದು ಶೇ 28.2ರಷ್ಟು ಪ್ರತಿಶತದ ಜಾಗತಿಕ ಸರಾಸರಿಗಿಂತ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ದೇಶದ ಶೇ 80ಕ್ಕೂ ಹೆಚ್ಚು ವಯಸ್ಕರಿಗಿದೆ ಬ್ಯಾಂಕ್ ಖಾತೆ: "ವಿವಿಧ ಕ್ರಮಗಳಿಂದಾಗಿ, ಭಾರತದ ಆರ್ಥಿಕ ಸೇರ್ಪಡೆ ಗಮನಾರ್ಹವಾಗಿ ಸುಧಾರಿಸಿದೆ ಮತ್ತು 2011ರಲ್ಲಿ ಇದ್ದ ಶೇ 50ಕ್ಕೆ ಹೋಲಿಸಿದರೆ ಈಗ ಭಾರತದಲ್ಲಿ ಶೇಕಡಾ 80ಕ್ಕೂ ಹೆಚ್ಚು ವಯಸ್ಕರು ಔಪಚಾರಿಕ ಹಣಕಾಸು ಖಾತೆಯನ್ನು ಹೊಂದಿದ್ದಾರೆ. ಇದರಿಂದಾಗಿ ಭಾರತೀಯ ಕುಟುಂಬಗಳ ಹಣಕಾಸು ಉಳಿತಾಯ ಪ್ರಮಾಣ ಹೆಚ್ಚಾಗುತ್ತಿದೆ" ಎಂದು ವರದಿ ಗಮನಸೆಳೆದಿದೆ.
ಒಟ್ಟು ಗೃಹ ಉಳಿತಾಯದಲ್ಲಿ ನಿವ್ವಳ ಹಣಕಾಸು ಉಳಿತಾಯದ ಪಾಲು ಹಣಕಾಸು ವರ್ಷ 2014ರಲ್ಲಿ ಶೇಕಡಾ 36 ಇದ್ದದ್ದು 2021ರಲ್ಲಿ ಶೇಕಡಾ 52ಕ್ಕೆ ಏರಿದೆ. ಆದಾಗ್ಯೂ ಹಣಕಾಸು ವರ್ಷ 2022 ಮತ್ತು ಹಣಕಾಸು ವರ್ಷ 2023ರ ನಡುವೆ ಈ ಪ್ರಮಾಣ ಕುಸಿದಿದೆ. ಭೌತಿಕ ಉಳಿತಾಯದ ಪ್ರಮಾಣ ಮತ್ತೆ ಕುಸಿಯಲು ಪ್ರಾರಂಭಿಸಿದೆ ಎಂದು ಹಣಕಾಸು ವರ್ಷ 2024ರ ಅಂಕಿಅಂಶಗಳು ತೋರಿಸಿವೆ.
ಹಣಕಾಸು ಉಳಿತಾಯದಲ್ಲಿ, ಮ್ಯೂಚುವಲ್ ಫಂಡ್‌ಗಳಂತಹ ಹೂಡಿಕೆಯ ಹೊಸ ಮಾರ್ಗಗಳು ಹೊರಹೊಮ್ಮುತ್ತಿರುವುದರಿಂದ ಬ್ಯಾಂಕ್ ಠೇವಣಿಗಳು ಮತ್ತು ಕರೆನ್ಸಿಯ ರೂಪದಲ್ಲಿ ಉಳಿತಾಯದ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ಸಂಶೋಧನಾ ವಿಭಾಗದ ವರದಿ ತಿಳಿಸಿದೆ.
ಕಳೆದ 10 ವರ್ಷಗಳಲ್ಲಿ, ಬಂಡವಾಳ ಮಾರುಕಟ್ಟೆಗಳಿಂದ ಭಾರತೀಯ ಕಂಪನಿಗಳು ಸಂಗ್ರಹಿಸಿದ ಹಣವು 10 ಪಟ್ಟು ಹೆಚ್ಚಾಗಿದೆ. ಇದು 2014ರ ಹಣಕಾಸು ವರ್ಷದಲ್ಲಿ ಇದ್ದ 12,068 ಕೋಟಿ ರೂ.ಗಳಿಂದ 2025ರಲ್ಲಿ (ಅಕ್ಟೋಬರ್ ವರೆಗೆ) 1.21 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 'ಷೇರುಗಳು ಮತ್ತು ಸಾಲಪತ್ರಗಳಲ್ಲಿ' ಕುಟುಂಬಗಳ ಉಳಿತಾಯವು 2014ರ ಹಣಕಾಸು ವರ್ಷದಲ್ಲಿ ಇದ್ದ ಶೇಕಡಾ 0.2ರಿಂದ 2024ರಲ್ಲಿ ಜಿಡಿಪಿಯ ಶೇಕಡಾ 1ಕ್ಕೆ ಏರಿಕೆಯಾಗಿದೆ ಮತ್ತು ಗೃಹ ಹಣಕಾಸು ಉಳಿತಾಯದಲ್ಲಿ ಪಾಲು ಶೇಕಡಾ 1ರಿಂದ 5ಕ್ಕೆ ಏರಿದೆ. ಕುಟುಂಬಗಳು ಈಗ ದೇಶದ ಬಂಡವಾಳ ಅಗತ್ಯಗಳಿಗೆ ಹೆಚ್ಚಿನ ಕೊಡುಗೆ ನೀಡುತ್ತಿವೆ ಎಂಬುದು ಇದರಿಂದ ಕಂಡು ಬರುತ್ತದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ : 2018ರಲ್ಲಿ ಸ್ಥಗಿತಗೊಂಡಿದ್ದ ಗೋಲ್ಡನ್ ಚಾರಿಯೇಟ್ ಐಷಾರಾಮಿ ರೈಲು ಮತ್ತೆ ಆರಂಭ - GOLDEN CHARIOT TRAIN RESTARTED