ನವದೆಹಲಿ:ಮಾರ್ಚ್ 31, 2024 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಭಾರತದ ಪೆಟ್ರೋಲಿಯಂ ಉತ್ಪನ್ನಗಳಾದ ಡೀಸೆಲ್, ಪೆಟ್ರೋಲ್, ಎಲ್ಪಿಜಿ ಮತ್ತು ಬಿಟುಮೆನ್ ಬಳಕೆಯು ಶೇಕಡಾ 5 ರಷ್ಟು ಏರಿಕೆಯಾಗಿ 233.276 ಮಿಲಿಯನ್ ಟನ್ಗಳ ದಾಖಲೆಯ ಮಟ್ಟವನ್ನು ತಲುಪಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಂಗ್ರಹಿಸಿದ ಅಂಕಿ ಅಂಶಗಳು ತಿಳಿಸಿವೆ. 2022-2023ರಲ್ಲಿ ಪೆಟ್ರೋಲಿಯಂ ಸರಕುಗಳ ಒಟ್ಟಾರೆ ಬಳಕೆ 223.021 ಮಿಲಿಯನ್ ಟನ್ ಆಗಿತ್ತು.
ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ ಮುಖ್ಯವಾಗಿ ಟ್ರಕ್ಗಳು, ಬಸ್ಸು ಮತ್ತು ಕೃಷಿ ವಲಯದಲ್ಲಿ ಬಳಸಲಾಗುವ ಡೀಸೆಲ್ ಮಾರಾಟ ಶೇಕಡಾ 4.4 ರಷ್ಟು ಹೆಚ್ಚಾಗಿದೆ. ಇದು ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿರುವುದನ್ನು ಪ್ರತಿಬಿಂಬಿಸುತ್ತದೆ. ಈ ವರ್ಷದಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ಮಾರಾಟವು ಹೆಚ್ಚಾಗಿರುವ ಮಧ್ಯೆ ಪೆಟ್ರೋಲ್ ಬೇಡಿಕೆ ಶೇಕಡಾ 6.4 ರಷ್ಟು ಏರಿಕೆಯಾಗಿದೆ.
ಆರ್ಥಿಕತೆಯ ಬೆಳವಣಿಗೆಯನ್ನು ಉತ್ತೇಜಿಸಲು ಸರ್ಕಾರವು ಬೃಹತ್ ಪ್ರಮಾಣದ ಮೂಲಸೌಕರ್ಯ ಯೋಜನೆಗಳನ್ನು ಕೈಗೊಂಡಿದ್ದರಿಂದ ರಸ್ತೆಗಳನ್ನು ನಿರ್ಮಿಸಲು ಬಳಸಲಾಗುವ ಬಿಟುಮೆನ್ ಮಾರಾಟವು ಆರ್ಥಿಕ ವರ್ಷದಲ್ಲಿ ಶೇಕಡಾ 9.9 ರಷ್ಟು ಹೆಚ್ಚಾಗಿದೆ. ರಸಗೊಬ್ಬರಗಳನ್ನು ತಯಾರಿಸಲು ಬಳಸುವ ನಾಫ್ತಾ ಮಾರಾಟ ಕೂಡ ವರ್ಷದಲ್ಲಿ ಹೆಚ್ಚಾಗಿದೆ.