ಕರ್ನಾಟಕ

karnataka

ETV Bharat / business

₹23 ಸಾವಿರ ಕೋಟಿ ದಾಟಿದ ಭಾರತದ ಟೈರ್ ರಫ್ತು ಪ್ರಮಾಣ: ಶೇ 12ರಷ್ಟು ಹೆಚ್ಚಳ - Indian Tyre Exports - INDIAN TYRE EXPORTS

ಭಾರತದ ಟೈರ್ ರಫ್ತು ಪ್ರಮಾಣ ಶೇ 12ರಷ್ಟು ಹೆಚ್ಚಳವಾಗಿದೆ.

ಭಾರತದ ಟೈರ್ ರಫ್ತು ಪ್ರಮಾಣದಲ್ಲಿ ಹೆಚ್ಚಳ
ಸಂಗ್ರಹ ಚಿತ್ರ (IANS)

By ETV Bharat Karnataka Team

Published : Jun 12, 2024, 3:13 PM IST

ನವದೆಹಲಿ: 2023-24ರ ದ್ವಿತೀಯಾರ್ಧದಲ್ಲಿ ಭಾರತದ ಟೈರ್ ರಫ್ತು ಏರಿಕೆಯಾಗಿದೆ. ಪೂರ್ಣ ಹಣಕಾಸು ವರ್ಷದಲ್ಲಿ 23,073 ಕೋಟಿ ರೂ.ಗಳನ್ನು ತಲುಪಿದೆ ಎಂದು ಆಟೋಮೋಟಿವ್ ಟೈರ್ ತಯಾರಕರ ಸಂಘ (ಎಟಿಎಂಎ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವರ್ಷದ ಮೊದಲಾರ್ಧದಲ್ಲಿ, ಮುಂದುವರಿದ ದೇಶಗಳಲ್ಲಿನ ಆರ್ಥಿಕ ಮಂದಗತಿ, ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಮತ್ತು ಹಣದುಬ್ಬರದ ಒತ್ತಡಗಳಿಂದಾಗಿ ಬೇಡಿಕೆಯು ಕಡಿಮೆಯಾಗಿದ್ದರಿಂದ ಟೈರ್ ರಫ್ತು ತೀವ್ರವಾಗಿ ಕುಸಿತವಾಗಿತ್ತು ಎಂದು ಎಟಿಎಂಎ ಹೇಳಿದೆ.

ಯುಎಸ್ ಮತ್ತು ಇಯು ದೇಶಗಳಂತಹ ಮುಂದುವರಿದ ಮಾರುಕಟ್ಟೆಗಳು ಸೇರಿದಂತೆ 170ಕ್ಕೂ ಹೆಚ್ಚು ದೇಶಗಳಿಗೆ ಭಾರತೀಯ ಟೈರ್ ಗಳನ್ನು ರಫ್ತು ಮಾಡಲಾಗುತ್ತಿದೆ. ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 2023-24ರ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಭಾರತದಿಂದ ಟೈರ್ ರಫ್ತು ತೀವ್ರ ಚೇತರಿಕೆ ಕಂಡಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೌಲ್ಯದಲ್ಲಿ ಶೇಕಡಾ 12ರಷ್ಟು ಹೆಚ್ಚಾಗಿದೆ.

"ಕಠಿಣ ಬಾಹ್ಯ ವಾತಾವರಣದ ಹೊರತಾಗಿಯೂ ಈ ವರ್ಷದ ದ್ವಿತೀಯಾರ್ಧದಲ್ಲಿ ಟೈರ್ ರಫ್ತು ಹೆಚ್ಚಾಗಿರುವುದು ಸವಾಲಿನ ಸಮಯವನ್ನು ಎದುರಿಸಲು ಮತ್ತು ತನ್ನದೇ ಆದ ಸ್ಥಾನವನ್ನು ಪಡೆಯುವಲ್ಲಿ ಭಾರತೀಯ ಟೈರ್ ಉದ್ಯಮವು ಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸಿದೆ" ಎಂದು ಎಟಿಎಂಎ ಅಧ್ಯಕ್ಷ ಅರ್ನಬ್ ಬ್ಯಾನರ್ಜಿ ಹೇಳಿದರು.

"ಸುಮಾರು 90,000 ಕೋಟಿ ರೂ.ಗಳ ವಹಿವಾಟು ಮತ್ತು 23,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ರಫ್ತುಗಳೊಂದಿಗೆ, ಭಾರತೀಯ ಟೈರ್ ಉದ್ಯಮವು ಹೆಚ್ಚಿನ ರಫ್ತು-ವಹಿವಾಟು ಅನುಪಾತವನ್ನು ಹೊಂದಿರುವ ಕೆಲವೇ ಉತ್ಪಾದನಾ ಕ್ಷೇತ್ರಗಳಲ್ಲಿ ಒಂದಾಗಿದೆ" ಎಂದು ಎಟಿಎಂಎ ಹೇಳಿದೆ. ವಿಶ್ವಾದ್ಯಂತದ ಆರ್ಥಿಕ ಚಟುವಟಿಕೆಯಲ್ಲಿನ ಸುಧಾರಣೆಯು ಭಾರತೀಯ ಟೈರ್ ತಯಾರಕರಿಗೆ ಹೊಸ ಅವಕಾಶಗಳನ್ನು ತೆರೆಯುವ ನಿರೀಕ್ಷೆಯಿದೆ ಎಂದು ಎಟಿಎಂಎ ಮಾಹಿತಿ ನೀಡಿದೆ.

ಆದಾಗ್ಯೂ, ಟೈರ್​ಗಳ ರಫ್ತಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನೈಸರ್ಗಿಕ ರಬ್ಬರ್ ಪೂರೈಕೆಯಲ್ಲಿನ ಅಡೆತಡೆಗಳನ್ನು ನಿವಾರಿಸಬೇಕಿದೆ ಎಂದು ಎಟಿಎಂಎ ತಿಳಿಸಿದೆ.

ಟೈರ್ ಉದ್ಯಮವು ರಫ್ತು ಬಾಧ್ಯತೆಗೆ ಪ್ರತಿಯಾಗಿ ನೈಸರ್ಗಿಕ ರಬ್ಬರ್ ಆಮದಿಗಾಗಿ ಆಮದು ಪೂರ್ವ ಷರತ್ತುಗಳನ್ನು ಪೂರೈಸಬೇಕಾಗಿದೆ. ಇದು ಉದ್ಯಮದ ಕಾರ್ಯಾಚರಣೆಗಳನ್ನು ತುಂಬಾ ಸಂಕುಚಿತಗೊಳಿಸುತ್ತದೆ ಮತ್ತು ರಫ್ತು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.

"ರಫ್ತು ಬಾಧ್ಯತೆಯ ಅವಧಿಯನ್ನು 18 ತಿಂಗಳಿಗೆ ಇಳಿಸಬೇಕಿದೆ. ರಫ್ತು ಬಾಧ್ಯತೆಯ ಅವಧಿಯನ್ನು (ಟೈರ್ ಗಳಿಗೆ) ಸ್ವಲ್ಪ ಸಮಯದ ಹಿಂದೆ 18 ರಿಂದ 6 ತಿಂಗಳಿಗೆ ಇಳಿಸಲಾಯಿತು. ಇದರಿಂದಾಗಿ ದೇಶೀಯವಾಗಿ ಕಡಿಮೆ ಪ್ರಮಾಣದಲ್ಲಿ ಲಭ್ಯವಾಗುವ ಕಚ್ಚಾ ವಸ್ತುಗಳನ್ನು ಪಡೆಯವುದು ಉದ್ಯಮಕ್ಕೆ ಕಷ್ಟಕರವಾಗಿದೆ" ಎಂದು ಎಟಿಎಂಎ ತಿಳಿಸಿದೆ.

ಇದನ್ನೂ ಓದಿ: ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ದರೆ ಈ ಸಾಫ್ಟ್​ ಸ್ಕಿಲ್ಸ್​​ ಅತ್ಯವಶ್ಯಕ - most in demand soft skills

ABOUT THE AUTHOR

...view details