ನವದೆಹಲಿ:ಪ್ರಸ್ತುತ ವಿಶ್ವದ 3 ಆರ್ಥಿಕ ಆಶಾವಾದಿ ದೇಶಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದುಕೊಂಡಿದೆ ಎಂದು ಜಾಗತಿಕ ಸಮೀಕ್ಷೆಯೊಂದು ಹೇಳಿದೆ. ವಿವಿಧ ದೇಶಗಳಲ್ಲಿನ ಜನರ ಆರ್ಥಿಕ ದೃಷ್ಟಿಕೋನದ ಆಧಾರದ ಮೇಲೆ ಸಿಂಗಾಪುರ ಮತ್ತು ಇಂಡೋನೇಷ್ಯಾ ಸೇರಿದಂತೆ ಭಾರತ ಕೂಡ ಅಗ್ರ ಮೂರು ಅತ್ಯಂತ ಆಶಾವಾದಿ ರಾಷ್ಟ್ರಗಳಲ್ಲಿ ಒಂದಾಗಿದೆ ಹೊಸ ಜಾಗತಿಕ ಸಮೀಕ್ಷೆ ತಿಳಿಸಿದೆ.
ಜೂನ್ನಲ್ಲಿ ನಡೆದ ಇಪ್ಸೋಸ್ "ಜಗತ್ತನ್ನು ಬಾಧಿಸುತ್ತಿರುವ ಚಿಂತೆಯ ವಿಷಯಗಳು" (What Worries the World) ಸಮೀಕ್ಷೆಯ ಪ್ರಕಾರ, ಸಮೀಕ್ಷೆಯಲ್ಲಿ ಭಾಗವಹಿಸಿದ ಭಾರತೀಯರ ಪೈಕಿ ಶೇಕಡಾ 69 ರಷ್ಟು ಜನರು ತಮ್ಮ ದೇಶವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ. ಸಿಂಗಾಪುರದಲ್ಲಿ ಶೇಕಡಾ 79 ಮತ್ತು ಮತ್ತು ಇಂಡೋನೇಷ್ಯಾದಲ್ಲಿ ಶೇಕಡಾ 70 ರಷ್ಟು ಜನ ತಮ್ಮ ದೇಶಗಳ ಬಗ್ಗೆ ಇಂಥದೇ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಈ ಮೂರು ದೇಶಗಳ ಜನರ ಆರ್ಥಿಕ ಆಶಾವಾದವು ಜಾಗತಿಕ ಸರಾಸರಿಗೆ ವ್ಯತಿರಿಕ್ತವಾಗಿದೆ. ಜಾಗತಿಕವಾಗಿ ಕೇವಲ ಶೇಕಡಾ 38 ರಷ್ಟು ನಾಗರಿಕರು ಮಾತ್ರ ಈ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದ್ಧಾರೆ.
ಸಮೀಕ್ಷೆಯ ಪ್ರಕಾರ ನಗರ ಪ್ರದೇಶಗಳ ಭಾರತೀಯರ ಪೈಕಿ ಶೇಕಡಾ 38ರಷ್ಟು ಜನ ಹಣದುಬ್ಬರ ಹಾಗೂ ಶೇಕಡಾ 35 ರಷ್ಟು ಜನ ನಿರುದ್ಯೋಗವು ತಮಗೆ ಪ್ರಮುಖ ಪ್ರಮುಖ ಚಿಂತೆಯ ವಿಷಯವಾಗಿದೆ ಎಂದಿದ್ಧಾರೆ. ಆದಾಗ್ಯೂ, ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಈ ಆತಂಕದ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಈ ಅವಧಿಯಲ್ಲಿ ಹಣದುಬ್ಬರವು ಶೇಕಡಾ 3 ರಷ್ಟು ಮತ್ತು ನಿರುದ್ಯೋಗವು ಗಮನಾರ್ಹವಾಗಿ ಶೇಕಡಾ 9 ರಷ್ಟು ಕಡಿಮೆಯಾಗಿದೆ.
ಜಾಗತಿಕವಾಗಿ ಆರ್ಥಿಕ ಆಶಾವಾದದ ಚಿತ್ರಣವು ತುಂಬಾ ಮಂಕಾಗಿದೆ. ಹಣದುಬ್ಬರ (ಶೇ 33) ಮತ್ತು ಅಪರಾಧ ಮತ್ತು ಹಿಂಸಾಚಾರ (ಶೇ 30), ಬಡತನ ಮತ್ತು ಸಾಮಾಜಿಕ ಅಸಮಾನತೆ (ಶೇ 29), ನಿರುದ್ಯೋಗ (ಶೇ 27) ಮತ್ತು ಹಣಕಾಸು ಮತ್ತು ರಾಜಕೀಯ ಭ್ರಷ್ಟಾಚಾರ (ಶೇ 25)ದ ವಿಷಯಗಳು ವಿಶ್ವದ ಜನತೆಯಲ್ಲಿ ಆತಂಕ ಮೂಡಿಸಿರುವ ವಿಚಾರಗಳಾಗಿವೆ.
ಈ ಸಮೀಕ್ಷೆಯನ್ನು ಮೇ 24, 2024 ಮತ್ತು ಜೂನ್ 7, 2024 ರ ನಡುವೆ 29 ದೇಶಗಳ 25,520 ವಯಸ್ಕರನ್ನು ಒಳಗೊಂಡು ಇಪ್ಸೋಸ್ ಆನ್ ಲೈನ್ ಪ್ಯಾನಲ್ ವ್ಯವಸ್ಥೆಯ ಮೂಲಕ ನಡೆಸಲಾಯಿತು. ಆಸ್ಟ್ರೇಲಿಯಾ, ಬೆಲ್ಜಿಯಂ, ಬ್ರೆಜಿಲ್ ಮತ್ತು ಕೆನಡಾ ಸೇರಿದಂತೆ ಹಲವಾರು ದೇಶಗಳಲ್ಲಿನ ಸುಮಾರು 1,000 ವ್ಯಕ್ತಿಗಳು ಹಾಗೂ ಭಾರತ, ಅರ್ಜೆಂಟೀನಾ, ಚಿಲಿ, ಇಂಡೋನೇಷ್ಯಾ ಮತ್ತು ಇಸ್ರೇಲ್ನಲ್ಲಿ ಸುಮಾರು 500 ವ್ಯಕ್ತಿಗಳು ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.
ಭಾರತದ ಆಶಾವಾದಿ ದೃಷ್ಟಿಕೋನದ ಬಗ್ಗೆ ಪ್ರತಿಕ್ರಿಯಿಸಿದ ಇಪ್ಸೋಸ್ ಇಂಡಿಯಾ ಸಿಇಒ ಅಮಿತ್ ಅದಾರ್ಕರ್, ಜಾಗತಿಕ ಆರ್ಥಿಕ ಪ್ರತಿಕೂಲತೆಯ ಪರಿಣಾಮವನ್ನು ತಗ್ಗಿಸುವಲ್ಲಿ ಭಾರತ ಸರ್ಕಾರದ ಪಾತ್ರವನ್ನು ಶ್ಲಾಘಿಸಿದರು. ಇಂಧನ ಬೆಲೆಗಳು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡ ಕ್ರಮಗಳು, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವ ನಿರೀಕ್ಷೆ, ಬ್ರಿಕ್ಸ್ ಮತ್ತು ಜಿ 7 ಶೃಂಗಸಭೆಯಂತಹ ವೇದಿಕೆಗಳ ಮೂಲಕ ಜಾಗತಿಕ ವೇದಿಕೆಯಲ್ಲಿ ಅದರ ಹೆಚ್ಚುತ್ತಿರುವ ಪ್ರಭಾವವು ಭಾರತೀಯ ನಾಗರಿಕರಲ್ಲಿ ಭವಿಷ್ಯದ ಸಕಾರಾತ್ಮಕ ದೃಷ್ಟಿಕೋನಕ್ಕೆ ಕಾರಣವಾಗುವ ಅಂಶಗಳಾಗಿವೆ ಎಂದು ಅವರು ಉಲ್ಲೇಖಿಸಿದರು.
ಇದನ್ನೂ ಓದಿ : 10 ವರ್ಷಗಳಲ್ಲಿ ಭಾರತದಲ್ಲಿನ ಬಡತನ ಶೇ 21 ರಿಂದ 8.5ಕ್ಕೆ ಇಳಿಕೆ: ಎನ್ಸಿಎಇಆರ್ ವರದಿ - Poverty headcount ratio falls