ಸಿಯೋಲ್: ದಕ್ಷಿಣ ಕೊರಿಯಾದ ಅತಿದೊಡ್ಡ ಕಾರು ತಯಾರಕ ಕಂಪನಿಗಳಾದ ಹ್ಯುಂಡೈ ಮೋಟಾರ್ ಮತ್ತು ಕಿಯಾ ಕಳೆದ 15 ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಒಟ್ಟು 5 ದಶಲಕ್ಷಕ್ಕೂ (50 ಲಕ್ಷ) ಹೆಚ್ಚು ಪರಿಸರ ಸ್ನೇಹಿ ವಾಹನಗಳನ್ನು ಮಾರಾಟ ಮಾಡಿವೆ ಎಂದು ಕಂಪನಿಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು (ಎಚ್ಇವಿ), ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು (ಪಿಎಚ್ಇವಿಗಳು), ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಮತ್ತು ಫ್ಯೂಯೆಲ್ ಸೆಲ್ ಎಲೆಕ್ಟ್ರಿಕ್ ವಾಹನಗಳು (ಎಫ್ಸಿಇವಿಗಳು) ಸೇರಿದಂತೆ ಒಟ್ಟು 5.11 ಮಿಲಿಯನ್ ಸಂಖ್ಯೆಯ ಪರಿಸರ ಸ್ನೇಹಿ ಕಾರುಗಳನ್ನು ಎರಡೂ ಕಂಪನಿಗಳು ಜನವರಿ ಅಂತ್ಯದ ವೇಳೆಗೆ ಮಾರಾಟ ಮಾಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2023 ರ ವರ್ಷವೊಂದರಲ್ಲಿಯೇ ಹ್ಯುಂಡೈ ಮೋಟಾರ್ ಮತ್ತು ಅದರ ಸಣ್ಣ ಅಂಗಸಂಸ್ಥೆ ಕಿಯಾ ಒಟ್ಟು 1.36 ಮಿಲಿಯನ್ ಪರಿಸರ ಸ್ನೇಹಿ ವಾಹನಗಳನ್ನು ಮಾರಾಟ ಮಾಡಿದ್ದು, ಸತತ ಎರಡನೇ ವರ್ಷ 1 ಮಿಲಿಯನ್ ಗಡಿಯನ್ನು ತಲುಪಿವೆ. ಒಟ್ಟು ಮಾರಾಟದಲ್ಲಿ ಎಚ್ಇವಿಗಳು ಶೇಕಡಾ 57.8 ರಷ್ಟು ಪಾಲು ಹೊಂದಿದ್ದು, ನಂತರದ ಸ್ಥಾನಗಳಲ್ಲಿ ಇವಿಗಳು (30.8 ಶೇಕಡಾ), ಪಿಎಚ್ಇವಿಗಳು (10.6 ಶೇಕಡಾ) ಮತ್ತು ಎಫ್ಸಿಇವಿಗಳು (0.8 ಶೇಕಡಾ) ಇವೆ.