ಕರ್ನಾಟಕ

karnataka

ETV Bharat / business

ಬ್ಯಾಂಕ್ ವಂಚನೆಯಿಂದ ರಕ್ಷಿಸಿಕೊಳ್ಳುವುದು ಹೇಗೆ?: ಈ ಅಂಶಗಳ ಬಗ್ಗೆ ಇರಲಿ ಎಚ್ಚರ - Bank Fraud - BANK FRAUD

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್​ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸೈಬರ್​ ಕಳ್ಳರು ಮೋಸ ಮಾಡುತ್ತಿದ್ದಾರೆ. ಇಂತಹ ದುಷ್ಕೃತ್ಯಗಳಿಂದ ಬಚಾವಾಗಲು ಇಲ್ಲಿವೆ ಸಲಹೆಗಳು.

ಬ್ಯಾಂಕ್ ವಂಚನೆಯ ಬಗ್ಗೆ ಎಚ್ಚರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : May 26, 2024, 10:28 AM IST

ಹೈದರಾಬಾದ್​:ಶ್ರಮದಿಂದ ದುಡಿದ ಹಣವನ್ನು ಬ್ಯಾಂಕ್​ನಲ್ಲಿ ಕೂಡಿಟ್ಟಿರುತ್ತೇವೆ. ನಮ್ಮ ಅಗತ್ಯಕ್ಕೆ ಅದು ನೆರವಿಗೆ ಬರುತ್ತದೆ ಎಂದು ಜತನದಿಂದ ಕಾಪಾಡಿರುತ್ತೇವೆ. ಆದರೆ, ಈ ಆಧುನಿಕ ಯುಗದಲ್ಲಿ ಸೈಬರ್​ ಕಳ್ಳರು ಹಣ ಎಗರಿಸಲು ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ನಮ್ಮ ಖಾತೆಗೇ ಕನ್ನ ಹಾಕಿಬಿಡುತ್ತಾರೆ. ಇಂತಹ ಮೋಸದ ಬಗ್ಗೆ ವಿಶೇಷ ಎಚ್ಚರವಹಿಸಬೇಕು.

ಸಹಜವಾಗಿ ಬ್ಯಾಂಕ್‌ಗಳು ಎಂದಿಗೂ ಗ್ರಾಹಕರಿಗೆ ನೇರವಾಗಿ ಕರೆ ಮಾಡುವುದಿಲ್ಲ. ಇದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಕೆಲವೊಮ್ಮೆ ಬ್ಯಾಂಕ್‌ನಿಂದ ದೂರವಾಣಿ ಕರೆ ಬಂದಿದೆ ಎಂದು ಅನೇಕರು ಗೊಂದಲಕ್ಕೆ ಬಿದ್ದು, ಅವರು ಕೇಳಿದ ವಿವರಗಳೆಲ್ಲವನ್ನೂ ಹೇಳುತ್ತಾರೆ. ಹೀಗೆ ಮಾಡಿ ಸೈಬರ್​ ಕಳ್ಳರಿಗೆ ಆಹಾರವಾದ ಎಷ್ಟೋ ಉದಾಹರಣೆಗಳಿವೆ. ಇಂಥದ್ದು ಎಂದಿಗೂ ಮಾಡಬೇಡಿ. ಮೊಬೈಲ್‌ನಲ್ಲಿ ಬಂದ OTPಗಳನ್ನು ಯಾರಿಗೂ ಹೇಳಬೇಡಿ. ಸೈಬರ್ ಕಳ್ಳರು ಕಳುಹಿಸುವ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ.

ಎಪಿಕೆ ಫೈಲ್​​ಗಳ ಬಗ್ಗೆ ಎಚ್ಚರ:ಇದು ಆ್ಯಂಡ್ರಾಯ್ಡ್​ ಮೊಬೈಲ್ ಹೊಂದಿರುವವರು ಎದುರಿಸುವ ಮೊದಲ ಸವಾಲು. ಸೈಬರ್​ ಕಳ್ಳರು ಮೊಬೈಲ್​ಗೆ ಎಪಿಕೆ ಫೈಲ್​ ಕಳುಹಿಸುತ್ತಾರೆ. ನೀವು ಆಕಸ್ಮಿಕವಾಗಿ ಲಿಂಕ್​ ಅನ್ನು ಕ್ಲಿಕ್​ ಮಾಡಿ, ಅದನ್ನು ಮೊಬೈಲ್​ನಲ್ಲಿ ಇನ್​ಸ್ಟಾಲ್​ ಮಾಡಿಕೊಂಡಿರಿ ಎಂದುಕೊಳ್ಳಿ. ತಕ್ಷಣವೇ ಹ್ಯಾಕರ್​ಗಳು ನಿಮ್ಮ ಮೊಬೈಲ್​ ಅನ್ನು ಅವರ ನಿಯಂತ್ರಣಕ್ಕೆ ಪಡೆಯುತ್ತಾರೆ. ಅದರ ಮೂಲಕ ನಿಮ್ಮ ಬ್ಯಾಂಕ್​ ಖಾತೆಗಳ ವಹಿವಾಟಿನ ಮೇಲೆ ನಿಗಾ ಇಟ್ಟು, ಹಣ ಎಗರಿಸುತ್ತಾರೆ.

ಅದಕ್ಕಾಗಿಯೇ ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್‌ಗಳಂತಹ ಅನೇಕ ಬ್ಯಾಂಕ್‌ಗಳು ಈ APK ವಂಚನೆಗಳ ವಿರುದ್ಧ ಜಾಗರೂಕರಾಗಿರಲು ತಮ್ಮ ಗ್ರಾಹಕರಿಗೆ ಸೂಚನೆಗಳನ್ನು ನೀಡುತ್ತಿರುತ್ತವೆ. ಕೆವೈಸಿ ಅಪ್‌ಡೇಟ್ ಮತ್ತು ರಿವಾರ್ಡ್ ಪಾಯಿಂಟ್‌ಗಳ ಹೆಸರಿನಲ್ಲಿ ಕಳುಹಿಸಲಾಗುವ APK ಫೈಲ್‌ಗಳ ಬಗ್ಗೆ ತುಂಬಾ ಜಾಗರೂಕರಾಗಿರಿ. ಬ್ಯಾಂಕ್​​ಗಳು ಇಂತಹ ಯಾವುದೇ ಲಿಂಕ್‌ಗಳನ್ನು ಕಳುಹಿಸುವುದಿಲ್ಲ ಎಂಬುದು ಗೊತ್ತಿರಲಿ.

ಮೋಸ ಗುರುತಿಸುವುದು ಹೇಗೆ?:ಒಂದು ವೇಳೆ ನಿಮ್ಮ ಮೊಬೈಲ್​ಗೆ ಬಂದ ಸಂದೇಶದಲ್ಲಿ ಯಾವುದಾದರೂ APK ಫೈಲ್‌ಗಳಿದ್ದರೆ, ಅದನ್ನು ಇನ್​ಸ್ಟಾಲ್​ ಮಾಡಬೇಡಿ. ಮೋಸದ ಎಪಿಕೆ ಫೈಲ್​ ಕೆಲವೇ ಕೆಬಿ ಗಾತ್ರದಲ್ಲಿ ಇರುತ್ತದೆ. ಅಪ್ಪಿತಪ್ಪಿ ನೀವು ಅದನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿದಾಗ, ನಿಮ್ಮ ಫೋನ್‌ನಲ್ಲಿನ ಸಂಖ್ಯೆಗಳು, ಅಪ್ಲಿಕೇಶನ್‌ಗಳು, ಕ್ಯಾಮೆರಾ ಮುಂತಾದವುಗಳನ್ನು ಬಳಸಲು ಅದು ಅನುಮತಿ ಕೇಳುತ್ತದೆ. ತಕ್ಷಣವೇ ನೀವು ಇದು ವಂಚನೆಯ ಫೈಲ್​ ಎಂದು ಅರ್ಥಮಾಡಿಕೊಳ್ಳಬೇಕು. ಗೂಗಲ್ ಪ್ಲೇ ಸ್ಟೋರ್‌ನಿಂದ ಅಧಿಕೃತ ಅಪ್ಲಿಕೇಶನ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಿ.

ಸಂದೇಶಗಳ ಬಗ್ಗೆ ಇರಲಿ ಗಮನ:ವಿವಿಧ ಯೋಜನೆಗಳು ಮತ್ತು ವಿಮೆಗೆ ಸಂಬಂಧಿಸಿದ ಮಾಹಿತಿಯುಳ್ಳ ಸಂದೇಶಗಳು ಬ್ಯಾಂಕ್‌ಗಳ ಹೆಸರಿನಲ್ಲಿ ಬರುತ್ತಿರುತ್ತವೆ. ಆ ಲಿಂಕ್​ಗಳು ನಿಜವೆಂದು ಭಾವಿಸಿ ಕ್ಲಿಕ್ಕಿಸಿದರೆ, ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿ ಹ್ಯಾಕರ್​ಗಳ ಕೈ ಸೇರುತ್ತದೆ. ಹೀಗಾಗಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ವಿಷಯದಲ್ಲಿ ಬಹಳ ಎಚ್ಚರಿಕೆ ವಹಿಸುವಂತೆ ಸಲಹೆ ನೀಡುತ್ತಿರುತ್ತವೆ. ಯಾವುದೇ ಮಾಹಿತಿ ಬೇಕಾದಲ್ಲಿ, ನೇರವಾಗಿ ಬ್ಯಾಂಕ್ ಅನ್ನು ಸಂಪರ್ಕಿಸಬೇಕು.

OTP ಯಾರೊಂದಿಗೂ ಹಂಚಿಕೊಳ್ಳಬೇಡಿ:ಮೊಬೈಲ್​ಗೆ ಬರುವ ಒಟಿಪಿಗಳ ಬಗ್ಗೆ ತೀರಾ ಎಚ್ಚರಿಕೆ ವಹಿಸಬೇಕು. ಬ್ಯಾಂಕ್​ಗಳ ಸಹಜವಾಗಿ ಯಾವುದೇ ಮಾಹಿತಿ ಕೋರಿ ಅತಿ ಗೌಪ್ಯವಾಗಿರುವ ಒಟಿಪಿಯನ್ನು ಕಳುಹಿಸುವುದಿಲ್ಲ. ಹಾಗೊಂದು ವೇಳೆ ನಿಮಗೆ ಒಟಿಪಿ ಬಂದಲ್ಲಿ ಅದನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ. ನೀವು ಬ್ಯಾಂಕಿನ ವಹಿವಾಟು ನಡೆಸದೆಯೇ OTP ಸ್ವೀಕರಿಸಿದರೆ, ನೀವು ಖಂಡಿತವಾಗಿಯೂ ಅದನ್ನು ಅನುಮಾನಿಸಬೇಕು.

ಕ್ವಿಶಿಂಗ್ ಬಗ್ಗೆ ಗೊತ್ತೇ?:ಹೊಸ ಮಾದರಿಯ ವಂಚನೆಯ ಜಾಲವೇ ಈ ಕ್ವಿಶಿಂಗ್. ಅಂದರೆ, QR ಕೋಡ್ ಅನ್ನು ಗ್ರಾಹಕರ ಫೋನ್‌ಗೆ ಕಳುಹಿಸಲಾಗುತ್ತದೆ. ಇದು ಮೋಸದ ವೆಬ್‌ಸೈಟ್ ಲಿಂಕ್‌ಗಳನ್ನು ಹೊಂದಿರುತ್ತದೆ. QR ಕೋಡ್‌ಗಳಲ್ಲಿ ಏನಿದೆ ಎಂದು ತಿಳಿಯಲು ಪ್ರಯತ್ನಿಸಿದಾಗ ಒಂದು ವೆಬ್‌ಸೈಟ್ ತೆರೆದುಕೊಳ್ಳುತ್ತದೆ. ಅದು ಥೇಟ್​ ಬ್ಯಾಂಕ್​ನ ವೆಬ್​ಸೈಟ್​ನಂತೆಯೇ ಇರುತ್ತದೆ. ಲಾಗ್​ಇನ್​ ಆದ ತಕ್ಷಣ ಎಲ್ಲಾ ಮಾಹಿತಿಯನ್ನು ಕಲೆ ಹಾಕುತ್ತದೆ. ಕೆಲವೊಮ್ಮೆ QR ಕೋಡ್ ಅನ್ನು ಸ್ಕ್ಯಾನ್​ ಮಾಡಿದ ತಕ್ಷಣವೇ ಹಣ ಕಳುಹಿಸಲು PIN ನಮೂದಿಸಲು ಕೇಳುತ್ತದೆ. ಆಕಸ್ಮಾತ್​ ನೀವು ಪಿನ್ ನಂಬರ್ ಎಂಟರ್​ ಮಾಡಿದಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣ ಖಾಲಿಯಾಗುವುದು ಖಂಡಿತ!.

ಇದನ್ನೂ ಓದಿ:ಒಟಿಟಿ ಪ್ರಿಯರಿಗೆ ಗುಡ್​ನ್ಯೂಸ್: ಕೇವಲ ₹299ಕ್ಕೆ ಜಿಯೋ ಸಿನಿಮಾ ಪ್ರಿಮಿಯಂ 4K ಸ್ಟ್ರೀಮಿಂಗ್ - JioCinema 299 Plan

ABOUT THE AUTHOR

...view details