ನೀವು ಗಳಿಸಿದ ಹಣವನ್ನು ನಿಮ್ಮ ಮನೆಯಲ್ಲಿ ನಗದು ರೂಪದಲ್ಲಿಡಬಹುದು. ಇದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಆದರೆ ಆದಾಯ ತೆರಿಗೆ (IT) ನಿಯಮಗಳ ಪ್ರಕಾರ, ಅಧಿಕಾರಿಗಳು ತನಿಖೆ ನಡೆಸಿದಾಗ ಹಣ ಎಲ್ಲಿಂದ ಬಂತು ಎಂಬುದನ್ನು ನಿಖರವಾಗಿ ತಿಳಿಸಬೇಕಾಗುತ್ತದೆ. ತನಿಖಾಧಿಕಾರಿಗಳಿಗೆ ಮನೆಯಲ್ಲಿ ಇಟ್ಟಿರುವ ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ಎಲ್ಲಾ ದಾಖಲೆಗಳು ಸರಿಯಾಗಿ ಇಟ್ಟುಕೊಂಡಿದ್ದರೆ, ಚಿಂತಿಸಬೇಕಾದ ಅವಶ್ಯಕತೆಯೇ ಇಲ್ಲ.
ಲೆಕ್ಕಕ್ಕೆ ಸಿಗದ ನಗದನ್ನು ನೀವು ಏನು ಮಾಡುತ್ತೀರಿ?: ಆದಾಯ ತೆರಿಗೆ ಅಧಿಕಾರಿಗಳು ಆಗಾಗ್ಗೆ ದಾಳಿ ನಡೆಸುತ್ತಾರೆ. ಈ ದಾಳಿಯಲ್ಲಿ ವಶಪಡಿಸಿಕೊಂಡ ಹಣಕ್ಕೆ ಸರಿಯಾಗಿ ಲೆಕ್ಕ ಹಾಕದೇ ಇದ್ದರೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚು. ಸರಿಯಾದ ವಿವರಗಳನ್ನು ನೀಡಲು ವಿಫಲವಾದಲ್ಲಿ, ವಿಶೇಷವಾಗಿ ಆದಾಯಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲೆ ಭಾರಿ ದಂಡ ಹಾಕಬಹುದು. ಕೆಲವೊಮ್ಮೆ ನಿಮ್ಮ ಬಂಧನವೂ ಆಗುವ ಸಾಧ್ಯತೆ ಇದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಬಹಿರಂಗಪಡಿಸದ ಆದಾಯದ ಮೇಲೆ ಶೇಕಡಾ 78ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದರ ಜೊತೆಗೆ ದಂಡವನ್ನೂ ಹಾಕಲಾಗುತ್ತದೆ. ಅದಕ್ಕಾಗಿಯೇ ನೀವು ನಿಮ್ಮ ಆದಾಯದ ವಿವರಗಳನ್ನು ನಮೂದಿಸಿ ITR (Income Tax Return) ಸಲ್ಲಿಸಬೇಕು. ಅಲ್ಲದೇ ಸರಿಯಾದ ಲೆಕ್ಕ ಪುಸ್ತಕಗಳನ್ನು ನಿರ್ವಹಿಸಬೇಕು.