ನವದೆಹಲಿ:ತಾಪಮಾನ ಕಡಿಮೆ ಮಾಡುವ ಜೊತೆಗೆ ಇಂಗಾಲದ ಹೊರಸೂಸುವಿಕೆ ತಗ್ಗಿಸಲು ಭಾರತ ಹಸಿರು ಶಕ್ತಿ ಉತ್ಪನ್ನಗಳಿಗೆ ಉತ್ತೇಜನ ನೀಡುತ್ತಿದೆ. ಅದರಲ್ಲಿ ಸೌರ ಶಕ್ತಿ ಯೋಜನೆಯೂ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಸೂರ್ಯ ಘರ್ ಎಂಬ ಯೋಜನೆಗೆ ಚಾಲನೆ ನೀಡಿದ್ದು, ಜನರಿಗೆ ಸೌರ ಶಕ್ತಿ ಪ್ಯಾನಲ್ ಅಳವಡಿಕೆಗೆ ಉತ್ತೇಜಿಸಿದೆ. ಆದರೆ, ಭಾರತೀಯರು ಸೌರಶಕ್ತಿಯ ಪ್ಯಾನಲ್ಗಳ ಅಳವಡಿಕೆಯಲ್ಲಿ ಹಿಂದೇಟು ಹಾಕುತ್ತಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿದೆ. ಇದಕ್ಕೆ ಪ್ರಮುಖ ಕಾರಣ ದುಬಾರಿ ವೆಚ್ಚ ಹಾಗೂ ಕೌಶಲ್ಯದ ಉದ್ಯೋಗಿಗಳ ಕೊರತೆ ಮೇಲ್ಚಾವಣಿಯ ಸೋಲಾರ್ ಪವರ್ ಅಳವಡಿಕೆಗೆ ದೊಡ್ಡ ತೊಡಕಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ಲ್ಯುಮಿನೊಸ್ ಪವರ್ ಟೆಕ್ನಾಲಾಜಿಸ್ ಈ ಸಮೀಕ್ಷೆ ನಡೆಸಿದ್ದು, ಇದಕ್ಕಾಗಿ ಭಾರತದ 5 ಮೆಟ್ರೋ ಮತ್ತು 8 ಮೆಟ್ರೋ ಹೊರತಾದ ನಗರಗಳಲ್ಲಿ 4,318 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿದೆ. ಸೋಲಾರ್ ಸ್ಪೆಕ್ಟ್ರಮ್ ಆಫ್ ನ್ಯೂ ಇಂಡಿಯಾ ಹೆಸರಿನ ಅಡಿಯಲ್ಲಿ ಅಧ್ಯಯನ ನಡೆಸಲಾಗಿದೆ.
ನುರಿತ ಕಾರ್ಮಿಕರ ಕೊರತೆ; ಅಧ್ಯಯನದಲ್ಲಿ ಭಾಗಿಯಾದ ಶೇ 90ರಷ್ಟು ಮಂದಿ ಪ್ರತಿಕ್ರಿಯಿಸಿದಂತೆ, ಸೋಲಾರ್ ಪಾನಲ್ ಅಳವಡಿಕೆಗೆ ವಿಶೇಷ ಕೌಶಲ್ಯ ಅಗತ್ಯವಿದೆ ಎಂಬುದನ್ನು ಒಪ್ಪಿದ್ದಾರೆ. ಹಾಗೇ ಶೇ 45ರಷ್ಟು ಮಂದಿ ಈ ರೀತಿಯ ಕೌಶಲ್ಯಯುತ ಕಾರ್ಮಿಕರು ಸ್ಥಳೀಯವಾಗಿ ಅಲಭ್ಯ ಎಂದು ತಿಳಿಸಿದ್ದಾರೆ.