ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಏಪ್ರಿಲ್ ತಿಂಗಳಲ್ಲಿ 2.10 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಹೊಸ ತೆರಿಗೆ ಕಾನೂನು ಜಾರಿಗೆ ಬಂದ ಬಳಿಕ ಇದೇ ಮೊದಲ ಬಾರಿ 2 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ. ಅಷ್ಟೇ ಅಲ್ಲ, ವಾರ್ಷಿಕ ಜಿಎಸ್ಟಿ ಸಂಗ್ರಹದಲ್ಲಿ ಶೇ.12.4ರಷ್ಟು ಬೆಳವಣಿಗೆ ಕಂಡುಬಂದಿದೆ.
ಕೇಂದ್ರ ಹಣಕಾಸು ಸಚಿವಾಲಯದ ಹೇಳಿಕೆಯಂತೆ, 2024ರ ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ 2.10 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. 2023ರ ಇದೇ ತಿಂಗಳಲ್ಲಿ 1.87 ಲಕ್ಷ ಕೋಟಿ ರೂಪಾಯಿ ಖಜಾನೆ ಸೇರಿತ್ತು. ಈ ಸಲ ದೇಶೀಯ ವಹಿವಾಟು (ಶೇ.13.4ರಷ್ಟು) ಮತ್ತು ಆಮದು (ಶೇ.8.3ರಷ್ಟು) ಎರಡರಲ್ಲೂ ಬಲವಾದ ಏರಿಕೆ ದಾಖಲಾಗಿದೆ.
ಪ್ರಸ್ತುತ ಸಾಲಿನ ಏಪ್ರಿಲ್ ತಿಂಗಳ ಒಟ್ಟು ಜಿಎಸ್‌ಟಿಯಲ್ಲಿ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ-CGST) 43,846 ಕೋಟಿ ರೂ. ಹಾಗೂ ರಾಜ್ಯ ಜಿಎಸ್ಟಿ (ಎಸ್‌ಜಿಎಸ್‌ಟಿ-SGST) 53,538 ಕೋಟಿ ರೂ. ಸೇರಿದೆ. ಜೊತೆಗೆ ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ-IGST) 99,623 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇದರಲ್ಲಿ ಸರಕುಗಳ ಆಮದಿನ ಮೇಲೆ ಸಂಗ್ರಹವಾದ 37,826 ಕೋಟಿ ರೂ. ಮತ್ತು ಸೆಸ್ 13,260 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹವಾದ 1,008 ಕೋಟಿ ರೂ.) ಸೇರಿದೆ ಎಂದು ವಿತ್ತ ಇಲಾಖೆ ತಿಳಿಸಿದೆ.
ಮರುಪಾವತಿಗಳನ್ನು ಲೆಕ್ಕಹಾಕಿದ ನಂತರ, ಏಪ್ರಿಲ್ 2024ರ ನಿವ್ವಳ ಜಿಎಸ್ಟಿ ಆದಾಯವು 1.92 ಲಕ್ಷ ಕೋಟಿ ರೂಪಾಯಿಗಳಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಶೇ.17.1ರಷ್ಟು ಬೆಳವಣಿಗೆಯಾಗಿದೆ. ಇದೇ ವೇಳೆ, ಅಂತರ್‌ಸರ್ಕಾರಿ ಇತ್ಯರ್ಥದಲ್ಲಿ ಕೇಂದ್ರ ಸರ್ಕಾರವು 50,307 ಕೋಟಿ ರೂ.ಗಳನ್ನು ಸಿಜಿಎಸ್‌ಟಿ ಮತ್ತು 41,600 ಕೋಟಿ ರೂ.ಗಳನ್ನು ಎಸ್‌ಜಿಎಸ್‌ಟಿಗೆ ಸಂಗ್ರಹಿಸಿದ ಐಜಿಎಸ್‌ಟಿಯಿಂದ ಹಂಚಿಕೆ ಮಾಡಲಾಗಿದೆ. ಇದರಿಂದ ಸಿಜಿಎಸ್‌ಟಿಗೆ ಒಟ್ಟು 94,153 ಕೋಟಿ ರೂ. ಮತ್ತು ಎಸ್‌ಜಿಎಸ್‌ಟಿಗೆ 95,138 ಕೋಟಿ ರೂ.ಗಳ ಆದಾಯ ಹಂಚಿಕೆ ಮಾಡಿದಂತಾಗಿದೆ.