ನವದೆಹಲಿ:ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಡಿಸೆಂಬರ್ ತಿಂಗಳಲ್ಲಿ ಒಟ್ಟು 1.76 ಲಕ್ಷ ಕೋಟಿ ರೂ.ಗಳಾಗಿದ್ದು, ಕಳೆದ ವರ್ಷಕ್ಕಿಂತ ಶೇ.7.3 ರಷ್ಟು ಏರಿಕೆ ದಾಖಲಿಸಿರುವುದಾಗಿ ಹಣಕಾಸು ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದು ಬಂದಿದೆ.
2023ರ ಡಿಸೆಂಬರ್ನಲ್ಲಿ ಜಿಎಸ್ಟಿ ಸಂಗ್ರಹವು 1.64 ಲಕ್ಷ ಕೋಟಿ ರೂ.ಗಳಷ್ಟಿತ್ತು. ಸಿಜಿಎಸ್ಟಿ, ಎಸ್ಜಿಎಸ್ಟಿ, ಐಜಿಎಸ್ಟಿ ಮತ್ತು ಸೆಸ್ 2024ರ ಡಿಸೆಂಬರ್ನಲ್ಲಿ ಏರಿಕೆಯಾಗಿವೆ. 2024-25ರ ಸಾಲಿನಲ್ಲಿ ಇಲ್ಲಿಯವರೆಗೆ ಒಟ್ಟು ಜಿಎಸ್ಟಿ ಸಂಗ್ರಹವು ಶೇ. 9.1 ರಷ್ಟು ಏರಿಕೆಯಾಗಿ 16.33 ಲಕ್ಷ ಕೋಟಿ ರೂ.ಗೆ ತಲುಪಿದೆ. 2023ರ ಅವಧಿಯಲ್ಲಿ 14.97 ಲಕ್ಷ ಕೋಟಿ ರೂ ಸಂಗ್ರಹವಾಗಿತ್ತು.
2024ರ ಏಪ್ರಿಲ್ನಲ್ಲಿ ಜಿಎಸ್ಟಿ ಸಂಗ್ರಹವು ದಾಖಲೆಯ 2.10 ಲಕ್ಷ ಕೋಟಿ ರೂ.ಗೆ ಸಂಗ್ರಹವಾಗಿತ್ತು. 2023-24ರ ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು 20.18 ಲಕ್ಷ ಕೋಟಿ ರೂ.ಗೆ ದಾಖಲಾಗಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ. 11.7 ರಷ್ಟು ಹೆಚ್ಚಳವಾಗಿದೆ.
ಇತ್ತೀಚಿನ ಜಿಎಸ್ಟಿ ಸಂಗ್ರಹವು ಭಾರತದ ಆರ್ಥಿಕತೆಯ ಸಕಾರಾತ್ಮಕ ಬೆಳವಣಿಗೆ ಪ್ರತಿಬಿಂಬಿಸುತ್ತದೆ. ಇದು ಜಾಗತಿಕ ಅನಿಶ್ಚಿತತೆಗಳ ನಡುವೆ ಸ್ಥಿತಿಸ್ಥಾಪಕತ್ವವನ್ನು ಸೂಚಿಸುತ್ತದೆ.