ನವದೆಹಲಿ: ಅಧಿಕೃತ ಸಂಸ್ಥೆಗಳು ಗ್ರಾಹಕರಿಗೆ ಸೇವೆ ಅಥವಾ ವಹಿವಾಟು ಕರೆಗಳನ್ನು ಮಾಡುವ ಸಲುವಾಗಿ ಕೇಂದ್ರ ಸರ್ಕಾರವು ಗುರುವಾರದಿಂದ 160xxxxxxxxxx ಎಂಬ ಹೊಸ ಮೊಬೈಲ್ ಸಂಖ್ಯಾ ಸರಣಿಯನ್ನು ಪರಿಚಯಿಸಿದೆ. ಅಂದರೆ ಇನ್ನು ಮುಂದೆ ಕಂಪನಿಗಳು ಅಧಿಕೃತ ಸೇವಾ ಅಥವಾ ವಹಿವಾಟು ಕರೆಗಳನ್ನು ಮಾಡಲು 160 ಯಿಂದ ಆರಂಭವಾಗುವ 10 ಅಂಕಿಗಳ ದೂರವಾಣಿ ಸಂಖ್ಯೆಗಳನ್ನು ಬಳಸಲಿವೆ.
ಇದರಿಂದ ಗ್ರಾಹಕರು ಅಧಿಕೃತ ಹಾಗೂ ಕಾನೂನು ಬದ್ಧ ಕರೆಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ. ಅಲ್ಲದೆ 10 ಅಂಕಿಯ ಮೊಬೈಲ್ ಸಂಖ್ಯೆಗಳಿಂದ ಒಳಬರುವ ಅನಪೇಕ್ಷಿತ ಟೆಲಿಮಾರ್ಕೆಟಿಂಗ್ ಕರೆಗಳನ್ನು ಕೂಡ ಗುರುತಿಸಬಹುದು.
ಈವರೆಗೆ ಸೇವಾ ಅಥವಾ ವಹಿವಾಟು ಕರೆಗಳು ಹಾಗೂ ಟೆಲಿಮಾರ್ಕೆಟಿಂಗ್ ಕಂಪನಿಗಳಿಗೆ 140xxxxxxx ಸಂಖ್ಯಾ ಸರಣಿಯನ್ನು ನೀಡಲಾಗಿತ್ತು. ಇಂಥ ಸಂಖ್ಯಾ ಸರಣಿಯಿಂದ ಒಳಬರುವ ಬಹುತೇಕ ಕರೆಗಳನ್ನು ಗ್ರಾಹಕರು ಡಿಸ್ಕನೆಕ್ಟ್ ಮಾಡುತ್ತಿದ್ದರು. ಆದರೆ ಹೀಗೆ ಮಾಡಿದಾಗ ಅನೇಕ ಬಾರಿ ಗ್ರಾಹಕರು ತಮಗೆ ಉಪಯುಕ್ತವಾದ ಅಥವಾ ಅಗತ್ಯವಾದ ಸೇವಾ ಅಥವಾ ವಹಿವಾಟು ಕರೆಗಳನ್ನು ಸ್ವೀಕರಿಸದೆ ಅಧಿಕೃತ ಮಾಹಿತಿಯಿಂದ ವಂಚಿತವಾಗುತ್ತಿದ್ದರು.
ಈ ಸಮಸ್ಯೆಯನ್ನು ಪರಿಹರಿಸಲು ದೂರಸಂಪರ್ಕ ಇಲಾಖೆಯು ಸೇವಾ ಹಾಗೂ ವಹಿವಾಟು ಕರೆಗಳಿಗಾಗಿ 160xxxxxxx ಎಂಬ ಹೊಸ ಸಂಖ್ಯಾ ಸರಣಿಯನ್ನು ನಿಗದಿಪಡಿಸಿದೆ. ಅಧಿಕೃತ ಸಂಸ್ಥೆಗಳು ಇನ್ನು ಮುಂದೆ 160 ದಿಂದ ಆರಂಭವಾಗುವ ಸಂಖ್ಯೆಯಿಂದ ಸೇವೆ / ವಹಿವಾಟು ಧ್ವನಿ ಕರೆಗಳನ್ನು ಮಾಡಲಿವೆ.
"ಉದಾಹರಣೆಗೆ ಆರ್ಬಿಐ, ಸೆಬಿ, ಪಿಎಫ್ಆರ್ಡಿಎ, ಐಆರ್ಡಿಎ ಮುಂತಾದ ಹಣಕಾಸು ಸಂಸ್ಥೆಗಳು ಮಾಡುವ ಸೇವೆ / ವಹಿವಾಟು ಕರೆಗಳು 1601 ರಿಂದ ಪ್ರಾರಂಭವಾಗುತ್ತವೆ" ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಈ ಮೂಲಕ ಗ್ರಾಹಕರು ಸ್ಪ್ಯಾಮ್ ಕರೆಗಳು ಮತ್ತು ಅಗತ್ಯ ಕರೆಗಳನ್ನು ಗುರುತಿಸಬಹುದು ಎಂದು ಇಲಾಖೆ ಹೇಳಿದೆ.
"ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್ಪಿ) ಯಾವುದೇ ಸಂಸ್ಥೆಗೆ 160 ಸರಣಿಯ ಮೊಬೈಲ್ ಸಂಖ್ಯೆಗಳನ್ನು ನೀಡುವ ಮುನ್ನ ಆ ಸಂಸ್ಥೆಯು ತನಗೆ ನೀಡಲಾದ ಮೊಬೈಲ್ ಸಂಖ್ಯೆಗಳನ್ನು ಸೇವೆ / ವಹಿವಾಟು ಕರೆಗಳಿಗೆ ಮಾತ್ರ ಬಳಸುತ್ತದೆ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು ಕಡ್ಡಾಯ" ಎಂದು ಇಲಾಖೆ ಹೇಳಿದೆ. ಯಾವುದೇ ಅನುಮಾನಾಸ್ಪದ ಹಾಗೂ ವಂಚನೆಯ ಕರೆಗಳು ಬಂದಲ್ಲಿ ನಾಗರಿಕರು ಅದರ ಬಗ್ಗೆ ಸಂಚಾರ್ ಸಾಥಿ (www.sancharsaathi.gov.in) ನಲ್ಲಿರುವ ಚಕ್ಷು ಸೌಲಭ್ಯದಲ್ಲಿ ದೂರು ನೀಡಬಹುದು ಎಂದು ದೂರಸಂಪರ್ಕ ಇಲಾಖೆ ಹೇಳಿದೆ.
ಇದನ್ನೂ ಓದಿ : ಮುತ್ತೂಟ್ ಗ್ರೂಪ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಶಾರುಖ್ ಖಾನ್ ನೇಮಕ - Shah Rukh Khan