ನವದೆಹಲಿ: ಹಬ್ಬದ ಸೀಸನ್ ನಂತರ ಬೇಡಿಕೆ ಕಡಿಮೆಯಾದ ಕಾರಣ ದೇಶದಲ್ಲಿ ಚಿನ್ನದ ಬೆಲೆ ಸೋಮವಾರ 10 ಗ್ರಾಂಗೆ 77,000 ರೂ.ಗೆ ಇಳಿಕೆಯಾಗಿದೆ. ಇಂಡಿಯನ್ ಬುಲಿಯನ್ ಜ್ಯುವೆಲರ್ಸ್ ಅಸೋಸಿಯೇಷನ್ (ಐಬಿಜೆಎ) ಪ್ರಕಾರ, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 77,030 ರೂ.ಗೆ ಇಳಿದಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 100 ರೂ. ಏರಿಕೆಯಾಗಿ 75,180 ರೂ. ಹಾಗೂ 20 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 100 ರೂ. ಇಳಿಕೆಯಾಗಿ 68,500 ರೂ.ನಷ್ಟಿದೆ.
ಅಕ್ಟೋಬರ್ನಲ್ಲಿ ತೀವ್ರ ಏರಿಕೆ ಕಂಡಿದ್ದ ಚಿನ್ನದ ಬೆಲೆಗಳು ಪ್ರಸ್ತುತ ಕುಸಿಯುತ್ತಲೇ ಇವೆ. ನವೆಂಬರ್ 6 ರಂದು ಚಿನ್ನದ ಬೆಲೆ 10 ಗ್ರಾಂಗೆ 76,980 ರೂ.ಗೆ ಕನಿಷ್ಠಕ್ಕೆ ಕುಸಿತ ಕಂಡಿತ್ತು. ಸದ್ಯ ವಿವಾಹದ ಸೀಸನ್ ಆರಂಭವಾಗಲಿದ್ದು, ಮದುವೆ ಏರ್ಪಾಟಾಗಿರುವ ಕುಟುಂಬಗಳಿಗೆ ಚಿನ್ನದ ಬೆಲೆ ಇಳಿಕೆಯಾಗಿರುವುದು ಖುಷಿಯ ಸುದ್ದಿಯಾಗಿದೆ.
ಬೆಂಗಳೂರಿನಲ್ಲಿ ಇಂದು ಎಷ್ಟಿದೆ ಬೆಲೆ?:ಬೆಂಗಳೂರಿನಲ್ಲಿ 24 ಕ್ಯಾರೆಟ್ನ ಚಿನ್ನದ ಬೆಲೆ 10 ಗ್ರಾಂಗೆ 600 ರೂ. ಕಡಿಮೆ ಆಗಿ. 78,760 ರೂ ಇದ್ದು, ನಿನ್ನ ಈ ಬೆಲೆ 79360 ರೂ. ಆಗಿತ್ತು.
ಅದೇ 22 ಕ್ಯಾರೆಟ್ ಬಂಗಾರ ಬೆಲೆ ಇಂದು 550 ರೂ ಕಡಿಮೆ ಆಗಿ 72200 ರೂ ಗೆ ವ್ಯಾಪಾರವಾಗುತ್ತಿದೆ. ನಿನ್ನೆ ಇದೇ ಬಂಗಾರ 72,750 ರೂಗೆ ಮಾರಾಟವಾಗುತ್ತಿತ್ತು.
ಹಬ್ಬದ ವೇಳೆ 81 ಸಾವಿರಕ್ಕೆ ತಲುಪಿದ್ದ ಬಂಗಾರದ ಬೆಲೆ:ಹಬ್ಬದ ಋತುವಿನಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ ಅಕ್ಟೋಬರ್ 23 ರಂದು 10 ಗ್ರಾಂಗೆ 81,500 ರೂ.ಗೆ ತಲುಪಿತ್ತು. ಸ್ಪಾಟ್ ಜೊತೆಗೆ, ಚಿನ್ನದ ಫ್ಯೂಚರ್ಸ್ ಬೆಲೆಯಲ್ಲಿಯೂ ಕುಸಿತ ಕಂಡು ಬಂದಿದೆ. ಎಂಸಿಎಕ್ಸ್ನಲ್ಲಿ ಚಿನ್ನದ ಡಿಸೆಂಬರ್ ಕಾಂಟ್ರ್ಯಾಕ್ಟ್ ಬೆಲೆ 10 ಗ್ರಾಂಗೆ 76,795 ರೂ. ಆಗಿದೆ. ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ, ಪ್ರಸ್ತುತ ಜಾಗತಿಕ ಚಿನ್ನದ ಬೆಲೆ ಪ್ರತಿ ಔನ್ಸ್ಗೆ 2,669 ಡಾಲರ್ ಆಗಿದೆ. ಶುಕ್ರವಾರ ಚಿನ್ನದ ದರ ಪ್ರತಿ ಔನ್ಸ್ಗೆ 2,647 ಡಾಲರ್ ಆಗಿತ್ತು.
ಅಮೆರಿಕದಲ್ಲಿ ಚುನಾವಣಾ ಫಲಿತಾಂಶಗಳು ಮತ್ತು ಡಾಲರ್ ಬಲವರ್ಧನೆಯಿಂದಾಗಿ ಅನಿಶ್ಚಿತತೆ ಕಡಿಮೆಯಾಗಿರುವುದು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆಗಳ ಕುಸಿತಕ್ಕೆ ಕಾರಣವಾಗಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 91,310 ರೂ. ಆಗಿದೆ. ಎಂಸಿಎಕ್ಸ್ನಲ್ಲಿ ಬೆಳ್ಳಿಯ ಡಿಸೆಂಬರ್ ಫ್ಯೂಚರ್ಸ್ ಬೆಲೆ ಪ್ರತಿ ಕೆ.ಜಿ.ಗೆ 90,888 ರೂ. ಇದೆ. ಜಾಗತಿಕವಾಗಿ, ಬೆಳ್ಳಿಯ ಬೆಲೆ ಪ್ರತಿ ಔನ್ಸ್ಗೆ 31.40 ಡಾಲರ್ ಆಗಿದೆ.
2024 ರ ಎರಡನೇ ತ್ರೈಮಾಸಿಕದಲ್ಲಿ, ಚಿನ್ನದ ಬೇಡಿಕೆ ಶೇಕಡಾ 6 ರಷ್ಟು ಇಳಿದು 929 ಟನ್ ಗಳಿಗೆ ತಲುಪಿದೆ. ಈ ಅವಧಿಯಲ್ಲಿ ತಂತ್ರಜ್ಞಾನ ವಲಯದಲ್ಲಿಯೂ ಚಿನ್ನದ ಬಳಕೆ ಹೆಚ್ಚಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿದೆ.
ನವೆಂಬರ್ 12 ರಿಂದ ಪ್ರಾರಂಭವಾಗುವ ಪ್ರಸಕ್ತ ಸಾಲಿನ ಮದುವೆಯ ಸೀಸನ್ಗೆ ಮುಂಚಿತವಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕಡಿಮೆಯಾಗಿರುವುದು ಜನತೆಗೆ ಕೊಂಚ ಖುಷಿಯ ವಿಚಾರವಾಗಿದೆ. ಈ ವರ್ಷದ ವಿವಾಹ ಋತುವಿನಲ್ಲಿ ನವೆಂಬರ್ನಲ್ಲಿ 12, 13, 17, 18, 22, 23, 25, 26, 28 ಮತ್ತು 29 ವಿವಾಹದ ಶುಭ ಮುಹೂರ್ತಗಳಾಗಿದ್ದರೆ, ಡಿಸೆಂಬರ್ ನಲ್ಲಿ 4, 5, 9, 10, 11, 14, 15 ಮತ್ತು 16 ವಿವಾಹದ ಶುಭ ಮುಹೂರ್ತಗಳಾಗಿವೆ. ಇದರ ನಂತರ ಮದುವೆಯ ಸೀಸನ್ಗೆ ಸುಮಾರು ಒಂದು ತಿಂಗಳ ವಿರಾಮವಿರುತ್ತದೆ. 2025 ರ ಜನವರಿಯಿಂದ ಮಾರ್ಚ್ ವರೆಗೆ ಮತ್ತೆ ವಿವಾಹ ಮುಹೂರ್ತಗಳಿವೆ.
ಇದನ್ನೂ ಓದಿ : ಆಂಧ್ರ ವಿಧಾನಸಭೆಯಲ್ಲಿ 2.94 ಲಕ್ಷ ಕೋಟಿ ರೂ. ಬಜೆಟ್ ಮಂಡನೆ: 68 ಸಾವಿರ ಕೋಟಿ ಕೊರತೆ ಅಂದಾಜು