ನವದೆಹಲಿ:ಹಬ್ಬದ ಸೀಸನ್ ಮತ್ತು ವಿವಾಹ ಸಮಾರಂಭಗಳ ಹಿನ್ನೆಲೆಯಲ್ಲಿ ಬಂಗಾರದ ಬೆಲೆ ಗಗನಮುಖಿಯಾಗುತ್ತಿದೆ. ಚಿನಿವಾರ ಪೇಟೆಯಲ್ಲಿ ಸದ್ಯ 10 ಗ್ರಾಂ ಚಿನ್ನದ ದರ 80,650 ರೂಪಾಯಿ ಇದೆ. ಸೋಮವಾರದ ವಹಿವಾಟಿನಲ್ಲಿ ಬಂಗಾರಕ್ಕೆ 750 ರೂಪಾಯಿ ಏರಿಕೆಯಾಗಿದೆ.
ಬೆಳ್ಳಿಯೂ ಕೂಡ ಹಿಂದೆ ಬೀಳದೆ ಕೆಜಿಗೆ ಒಂದೇ ದಿನ 5 ಸಾವಿರ ರೂಪಾಯಿ ಹೆಚ್ಚಾಗಿದೆ. ಸತತ ನಾಲ್ಕನೇ ದಿನವೂ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿ, ಕೆ.ಜಿಗೆ 99,500 ರೂಪಾಯಿ ಆಗಿದೆ. ಇದು ಸಾರ್ವಕಾಲಿಕ ಅತ್ಯಧಿಕ ಬೆಲೆ. ಬೆಳ್ಳಿ ಶುಕ್ರವಾರದ ವಹಿವಾಟಿನಲ್ಲಿ ಕೆ.ಜಿಗೆ 94,500 ರೂಪಾಯಿಗೆ ಬಿಕರಿಯಾಗಿತ್ತು.
24 ಕ್ಯಾರೆಟ್ನ (99.9 ರಷ್ಟು ಶುದ್ಧತೆ) 10 ಗ್ರಾಂ ಚಿನ್ನವು 750 ರೂಪಾಯಿ ಏರಿಕೆಯಾಗಿ 80,650 ರೂಪಾಯಿಗೆ ತಲುಪುವ ಮೂಲಕ ಹೊಸ ದಾಖಲೆ ಬರೆದಿದೆ. 22 ಕ್ಯಾರೆಟ್ (99.5 ರಷ್ಟು ಶುದ್ಧತೆ) ಹಳದಿ ಲೋಹವು 10 ಗ್ರಾಂಗೆ 79,900 ರೂಪಾಯಿಗೆ ವಹಿವಾಟು ನಡೆಸುತ್ತಿತ್ತು.