ನವದೆಹಲಿ: ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ 136.6 ಟನ್ಗಳಿಗೆ ಏರಿಕೆಯಾಗಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 8 ರಷ್ಟು ಹೆಚ್ಚಳವಾಗಿದೆ ಎಂದು ವಿಶ್ವ ಚಿನ್ನದ ಮಂಡಳಿ (ಡಬ್ಲ್ಯುಜಿಸಿ) ಮಂಗಳವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಬೆಲೆ ಏರಿಕೆಯ ಹೊರತಾಗಿಯೂ ಚಿನ್ನದ ಖರೀದಿ ಏರಿಕೆಯಾಗಿದೆ. ಇದು ಆರ್ಥಿಕತೆ ಮತ್ತು ಅದರೊಂದಿಗೆ ಆದಾಯವೂ ಬೆಳೆಯುತ್ತಿರುವುದರ ಸೂಚನೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.
ಭಾರತದ ಒಟ್ಟು ಚಿನ್ನದ ಬೇಡಿಕೆಯಲ್ಲಿ ಆಭರಣ ಚಿನ್ನದ ಬೇಡಿಕೆ ಶೇಕಡಾ 4 ರಷ್ಟು ಏರಿಕೆಯಾಗಿ 91.9 ಟನ್ಗಳಿಂದ 95.5 ಟನ್ಗಳಿಗೆ ತಲುಪಿದೆ. ಒಟ್ಟು ಚಿನ್ನದ ಮೇಲಿನ ಹೂಡಿಕೆಯ ಬೇಡಿಕೆ (ಬಾರ್, ನಾಣ್ಯಗಳ ರೂಪದಲ್ಲಿ)ಯು ಶೇಕಡಾ 19 ರಷ್ಟು ಏರಿಕೆಯಾಗಿ 34.4 ಟನ್ಗಳಿಂದ 41.1 ಟನ್ಗಳಿಗೆ ತಲುಪಿದೆ.
ಮೌಲ್ಯವಾರು ನೋಡುವುದಾದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಬೇಡಿಕೆ ಶೇಕಡಾ 20 ರಷ್ಟು ಏರಿಕೆಯಾಗಿ 75,470 ಕೋಟಿ ರೂ.ಗೆ ತಲುಪಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ರಷ್ಯಾ-ಉಕ್ರೇನ್ ಯುದ್ಧದ ನಡುವೆ ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುತ್ತಿರುವುದರಿಂದ ಚಿನ್ನದ ಬೇಡಿಕೆ ಹೆಚ್ಚಾಗುತ್ತಿದೆ.