ಭವಿಷ್ಯ ಉತ್ತಮವಾಗಿರಬೇಕು ಎಂದು ಬಯಸಿದರೆ ನಾವು ಬಂದ ಆದಾಯದಲ್ಲಿ ಸ್ವಲ್ಪ ಮೊತ್ತವನ್ನು ಉಳಿತಾಯ ಮಾಡಬೇಕಾದ ಅವಶ್ಯಕತೆ ಇರುತ್ತದೆ. ಆಗ ಮಾತ್ರ ನಮ್ಮ ಆರ್ಥಿಕ ಗುರಿಗಳು ಈಡೇರುತ್ತವೆ. ತುರ್ತು ಸಮಯದಲ್ಲಿ ಉಳಿತಾಯ ಮಾಡಿದ್ದ ಹಣ ನಮ್ಮ ನೆರವಿಗೆ ಬರುತ್ತದೆ. ಉಳಿತಾಯ ಯೋಜನೆಗಳ ವಿಷಯಕ್ಕೆ ಬಂದರೆ, ನಮಗೆ ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ) ಮತ್ತು ರಿಕರಿಂಗ್ ಠೇವಣಿ (ಆರ್‌ಡಿ) ಎಂಬ ಎರಡು ಆಯ್ಕೆಗಳಿವೆ. ನಿಮ್ಮ ಹಣಕಾಸಿನ ಗುರಿಗಳು, ನಷ್ಟವನ್ನು ಭರಿಸುವ ಸಾಮರ್ಥ್ಯ ಮತ್ತು ಹಣದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನೀವು ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ. ಇವುಗಳ ಬಗೆಗಿನ ವಿವರವಾದ ಮಾಹಿತಿ ಇಲ್ಲಿದೆ.
ಸ್ಥಿರ ಠೇವಣಿ (FD):
- ಸ್ಥಿರ ಠೇವಣಿಯಲ್ಲಿ ಒಮ್ಮೆಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ.
- FD ಗಳು ಸ್ಥಿರ ಬಡ್ಡಿದರಗಳನ್ನು ಹೊಂದಿವೆ. ಇವುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
- ನೀವು ಬಯಸಿದ ಅವಧಿಗೆ ನೀವು FD ಪಡೆಯಬಹುದು. ಅಂದರೆ ನೀವು ಕೆಲವು ದಿನಗಳು, ತಿಂಗಳುಗಳು ಅಥವಾ ವರ್ಷಗಳ ಅವಧಿಯೊಂದಿಗೆ ಸ್ಥಿರ ಠೇವಣಿ ಮಾಡಬಹುದು.
- ನೀವು ಬಯಸಿದಂತೆ FD ಪಾವತಿಯ ಆದ್ಯತೆಯನ್ನು ನೀವೇ ಆಯ್ಕೆ ಮಾಡಬಹುದು. ಅಂದರೆ ನಿಶ್ಚಿತ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಯನ್ನು ನಿಮ್ಮ ಅಗತ್ಯಗಳಿಗಾಗಿ ತೆಗೆದುಕೊಳ್ಳಬಹುದು. ಅಥವಾ ಬಡ್ಡಿಯನ್ನು ಮತ್ತೆ ಮರುಹೂಡಿಕೆ ಮಾಡಬಹುದು. ಇಲ್ಲವೇ ನೀವು ಕಾಂಪೌಂಡಿಂಗ್ ಆಯ್ಕೆಯನ್ನು ಆರಿಸಿಕೊಳ್ಳಬಹುದು.
ಮರುಕಳಿಸುವ ಠೇವಣಿ (RD):
- ಮರುಕಳಿಸುವ ಠೇವಣಿಗಳಲ್ಲಿ ನೀವು ನಿಯಮಿತವಾಗಿ (ಮಾಸಿಕ) ಹಣವನ್ನು ಉಳಿಸಬಹುದು.
- ಮರುಕಳಿಸುವ ಠೇವಣಿಯಲ್ಲಿ ನೀವು ಬಯಸಿದಷ್ಟು ಹಣವನ್ನು ಉಳಿತಾಯ ಕೂಡಾ ಮಾಡಬಹುದು.
- ಸ್ಥಿರ ಠೇವಣಿಯಂತೆ ಮರುಕಳಿಸುವ ಠೇವಣಿಯೂ ಸಹ ಸ್ಥಿರ ಬಡ್ಡಿದರವನ್ನು ಹೊಂದಿರುತ್ತದೆ.
- RD ಸಹ ನಿಗದಿತ ಅವಧಿಯ (ಫಿಕ್ಸೆಡ್ ಟೆನ್ಯೂರ್) ನಂತರ ಮೆಚ್ಯುರ್ ಆಗುತ್ತದೆ. ಆದ್ದರಿಂದ ನೀವು ಎಷ್ಟು ಆದಾಯವನ್ನು ಪಡೆಯುತ್ತೀರಿ ಎಂದು ನಿಮಗೆ ಮುಂಚಿತವಾಗಿ ತಿಳಿದಿರುತ್ತದೆ.
- FDಗೆ ಹೋಲಿಸಿದರೆ RD ನಲ್ಲಿ ಲಿಕ್ವಿಡಿಟಿ ಹೆಚ್ಚು. ಅಂದರೆ ನಿಮಗೆ ಅಗತ್ಯ ಇರುವಾಗ ಮರುಕಳಿಸುವ ಠೇವಣಿಯಿಂದ ಹಣವನ್ನು ಹಿಂಪಡೆಯಬಹುದು. ಅಗತ್ಯವಿದ್ದರೆ, ಆರ್‌ಡಿಯಲ್ಲಿ ಸಾಲವನ್ನು ಸಹ ತೆಗೆದುಕೊಳ್ಳಬಹುದು.