ಹೈದರಾಬಾದ್: ಭಾರತದ ಒಟ್ಟು ದೇಶೀಯ ಉತ್ಪಾದನೆ -ಜಿಡಿಪಿ ಬೆಳವಣಿಗೆ ದರವು ಮುಂದಿನ ಹಣಕಾಸು ವರ್ಷದಲ್ಲಿ 6.5 ಪ್ರತಿಶತಕ್ಕೆ ಕುಸಿಯುವ ನಿರೀಕ್ಷೆಯಿದೆ. ಈ ವರ್ಷದ ಮಾರ್ಚ್‌ನಲ್ಲಿ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಗರಿಷ್ಠ ಶೇ 7.3ರಷ್ಟು ಇರಲಿದೆ ಎಂದು ಈಗಾಗಲೇ ಅಂದಾಜಿಸಲಾಗಿದೆ.
ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ಹೆಗ್ಗಳಿಕೆ ಭಾರತಕ್ಕಿದೆ. ಈ ಟ್ಯಾಗ್ಲೈನ್ ಉಳಿಸಿಕೊಳ್ಳಲು ದೇಶಕ್ಕೆ ಸಾಕಷ್ಟು ಅವಕಾಶಗಳು ಇದ್ದಾಗ್ಯೂ ಈ ವರ್ಷ ದಾಖಲಾದ ತ್ವರಿತ ಬೆಳವಣಿಗೆ ನಿಧಾನಗೊಳಿಸುವ ಹಲವಾರು ಅಂಶಗಳು ನಮ್ಮ ಮುಂದಿವೆ. ಸರ್ಕಾರದ ನಿರಂತರ ಬಂಡವಾಳ ವೆಚ್ಚ, ಆರೋಗ್ಯಕರ ಕಾರ್ಪೊರೇಟ್ ಕಾರ್ಯಕ್ಷಮತೆ, ಖಾಸಗಿ ಬಂಡವಾಳ ವೆಚ್ಚದಲ್ಲಿ ಆಗುವ ಹೆಚ್ಚಳದ ನಿರೀಕ್ಷೆಗಳು ಮತ್ತು ಮೃದುವಾದ ಜಾಗತಿಕ ಸರಕು ಬೆಲೆಗಳು ಭಾರತದ ಆರ್ಥಿಕತೆ ವೇಗವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತಿವೆ. ದುರ್ಬಲ ರಫ್ತು ಮತ್ತು ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಹೆಚ್ಚಳದಂತಹ ಇತರ ಅಂಶಗಳು ಭಾರತ ಜಿಡಿಪಿ ಬೆಳವಣಿಗೆ ದರವನ್ನು ಮಿತಗೊಳಿಸುವ ಸಾಧ್ಯತೆಗಳೂ ಇವೆ.
ಫಿಚ್ ಗ್ರೂಪ್ ರೇಟಿಂಗ್ ಏಜೆನ್ಸಿಯಾದ ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ ಮಾಡಿರುವ ಲೆಕ್ಕಾಚಾರದ ಪ್ರಕಾರ, ಈ ವರ್ಷದ ಏಪ್ರಿಲ್ 1 ರಿಂದ ಪ್ರಾರಂಭವಾಗುವ ಮತ್ತು ಮಾರ್ಚ್ 31, 2025 ರಂದು ಕೊನೆಗೊಳ್ಳುವ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ 6.5 ಪ್ರತಿಶತದಷ್ಟಿರುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಪ್ರಾರಂಭವಾಗಿ ಈ ವರ್ಷದ ಮಾರ್ಚ್‌ನಲ್ಲಿ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯ ದರವು ಶೇಕಡಾ 7.3 ಎಂದು ಅಂದಾಜಿಸಲಾಗಿರುವುದರಿಂದ ಭಾರತದ ಜಿಡಿಪಿ ಸ್ವಲ್ಪ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಗಳೂ ಇವೆ. "ಮೂಲ ಪರಿಣಾಮದ ಹೊರತಾಗಿಯೂ, ಅನುಕ್ರಮ ಜಿಡಿಪಿ ಬೆಳವಣಿಗೆ ನಿರಂತರವಾಗಿರುತ್ತದೆ. ಸರ್ಕಾರಿ ಕ್ಯಾಪೆಕ್ಸ್, ಆರೋಗ್ಯಕರ ಕಾರ್ಪೊರೇಟ್ ಕಾರ್ಯಕ್ಷಮತೆ, ನಿಯೋಜಿತ ಕಾರ್ಪೊರೇಟ್ ಮತ್ತು ಬ್ಯಾಂಕಿಂಗ್ ವಲಯದ ಬ್ಯಾಲೆನ್ಸ್ ಶೀಟ್‌ಗಳು, ಜಾಗತಿಕ ಸರಕುಗಳ ಬೆಲೆಗಳಲ್ಲಿ ಕಂಡು ಬರುತ್ತಿರವ ಕುಸಿತದಿಂದಾಗಿ ದೇಶದ ಆರ್ಥಿಕ ಚೇತರಿಕೆ ಹಾದಿಯಲ್ಲಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಇಂಡಿಯಾ ರೇಟಿಂಗ್ಸ್ ಈಟಿವಿ ಭಾರತ್‌ಗೆ ಕಳುಹಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ಆದಾಗ್ಯೂ, ರೇಟಿಂಗ್ ಏಜೆನ್ಸಿಯು ಆರ್ಥಿಕತೆಗೆ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ. ಏಕೆಂದರೆ ಒಟ್ಟಾರೆ ಬೇಡಿಕೆಯು ಹೆಚ್ಚಾಗಿ ಸರ್ಕಾರದ ಬಂಡವಾಳ ವೆಚ್ಚದಿಂದಲೇ ನಡೆಸಲ್ಪಡುತ್ತದೆ ಎಂಬುದನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇದು ಜಿಡಿಪಿ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಪ್ರಚಲಿತ ಬಳಕೆಯ ಬೇಡಿಕೆಯು ಪ್ರತಿಶತ 50ರಷ್ಟಕ್ಕೆ ಸೇರಿದ ಕುಟುಂಬಗಳು ಸೇವಿಸುವ ಸರಕು ಮತ್ತು ಸೇವೆಗಳ ಪರವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.