ನವದೆಹಲಿ:ಭವಿಷ್ಯ ನಿಧಿ (ಪಿಎಫ್) ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಪಿಎಫ್ ಖಾತೆಗಳ ಮೇಲಿನ ಠೇವಣಿ ಮೊತ್ತಕ್ಕೆ ನೀಡಲಾಗುವ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ. ಈ ವರ್ಷದ ಹಣಕಾಸಿನ ವರ್ಷವಾದ 2023-24 ರ ಸಾಲಿನಲ್ಲಿ ಭವಿಷ್ಯ ನಿಧಿ (ಪಿಎಫ್) ಹಣದ ಮೇಲಿನ ಬಡ್ಡಿಯನ್ನು ಶೇಕಡಾ 8.25ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ನೀಡುತ್ತಿದ್ದ 8.15 ಪ್ರಮಾಣಕ್ಕೆ ಹೆಚ್ಚುವರಿಯಾಗಿ ಶೇಕಡಾ 0.10 ರಷ್ಟು ಹೆಚ್ಚಳ ಮಾಡಲಾಗಿದೆ.
ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಕೇಂದ್ರ ಟ್ರಸ್ಟಿಗಳ ಮಂಡಳಿಯು ಶನಿವಾರ (ಫೆಬ್ರವರಿ 10 ರಂದು) ನಡೆಸಿದ 235 ನೇ ಸಭೆಯಲ್ಲಿ ಬಡ್ಡಿ ದರ ಹೆಚ್ಚಳ ಮಾಡುವ ಬಗ್ಗೆ ನಿರ್ಣಯಿಸಲಾಗಿದೆ ಎಂದು ಘೋಷಿಸಲಾಗಿದೆ. ಕೇಂದ್ರದ ಹಣಕಾಸು ಸಚಿವಾಲಯವು ಈ ನಿರ್ಣಯಕ್ಕೆ ಅನುಮೋದನೆ ನೀಡಿದ ಬಳಿಕ ಸರ್ಕಾರಿ ಗೆಜೆಟ್ ಹೊರಡಿಸಲಾಗುತ್ತದೆ. ನಂತರ ಇಪಿಎಫ್ಒ ತನ್ನ ಠೇವಣಿದಾರರ ಖಾತೆಗಳಿಗೆ ಅನುಮೋದಿತ ಬಡ್ಡಿ ದರವನ್ನು ಕ್ರೆಡಿಟ್ ಮಾಡುತ್ತದೆ.
6 ಕೋಟಿ ಉದ್ಯೋಗಿಗಳಿಗೆ ಲಾಭ:ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ಸಭೆಯು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್, ಉಪಾಧ್ಯಕ್ಷ ರಾಮೇಶ್ವರ ತೇಲಿ ಅವರ ನೇತೃತ್ವದಲ್ಲಿ ಈಚೆಗೆ ಸಭೆ ನಡೆಯಿತು. ಇದರಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲಿನ ಬಡ್ಡಿದರ ಏರಿಕೆ ಮಾಡುವ ಬಗ್ಗೆ ಎಲ್ಲ ಸದಸ್ಯರು ಪ್ರಸ್ತಾಪ ಸಲ್ಲಿಸಿದರು.