ನವದೆಹಲಿ: ಮಾರ್ಚ್ 31 ರಿಂದ ಪ್ರಾರಂಭವಾಗುವ ಮುಂಬರುವ ಬೇಸಿಗೆ ವೇಳಾಪಟ್ಟಿಯಲ್ಲಿ ಭಾರತೀಯ ವಿಮಾನಯಾನ ಕಂಪನಿಗಳು ಒಟ್ಟು 24,275 ಸಾಪ್ತಾಹಿಕ ದೇಶೀಯ ವಿಮಾನ ಸಂಚಾರಗಳನ್ನು ನಡೆಸಲಿವೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಗುರುವಾರ ತಿಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಸರಿಸುಮಾರು ಆರು ಪ್ರತಿಶತದಷ್ಟು ಹೆಚ್ಚಳವಾಗಿದೆ.
ವಾಯುಯಾನ ನಿಯಂತ್ರಕ ಡಿಜಿಸಿಎ ಪ್ರಕಾರ, ನಿಗದಿತ ವಿಮಾನಯಾನ ಕಂಪನಿಗಳು 23,732 ವಿಮಾನಯಾನ ಮಾರ್ಗಗಳಲ್ಲಿ ಸಂಚಾರಗಳನ್ನು ನಿರ್ವಹಿಸುತ್ತಿದ್ದು, ಚಳಿಗಾಲದ ವೇಳಾಪಟ್ಟಿಗೆ ಹೋಲಿಸಿದರೆ ಸಾಪ್ತಾಹಿಕ ನಿರ್ಗಮನಗಳ ಸಂಖ್ಯೆ ಕೇವಲ 2.30 ರಷ್ಟು ಹೆಚ್ಚಾಗಿದೆ.
ಫೆಬ್ರವರಿಯಲ್ಲಿ ನಡೆದ ಸ್ಲಾಟ್ ಕಾನ್ಫರೆನ್ಸ್ ಸಭೆಯ ನಂತರ ನಿಗದಿತ ದೇಶೀಯ ವಿಮಾನಯಾನ ಸಂಸ್ಥೆಗಳ ಬೇಸಿಗೆ ವೇಳಾಪಟ್ಟಿ 2024 (ಎಸ್ಎಸ್ 24) ಅನ್ನು ಮಾರ್ಚ್ 31 ರಿಂದ ಅಕ್ಟೋಬರ್ 26 ರವರೆಗೆ ಜಾರಿಗೆ ತರಲಾಗುವುದು ಎಂದು ಡಿಜಿಸಿಎ ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
"ಅಂತಿಮ ಸ್ಲಾಟ್ ಅನುಮತಿಗಳನ್ನು ಆಯಾ ವಿಮಾನ ನಿಲ್ದಾಣ ನಿರ್ವಾಹಕರಿಂದ ಸ್ವೀಕರಿಸಲಾಗಿದೆ. ಎಸ್ಎಸ್ 24 ರ ಪ್ರಕಾರ ವಾರಕ್ಕೆ 24,275 ನಿರ್ಗಮನಗಳನ್ನು 125 ವಿಮಾನ ನಿಲ್ದಾಣಗಳಿಗೆ ಮತ್ತು ಅಲ್ಲಿಂದ ಅಂತಿಮಗೊಳಿಸಲಾಗಿದೆ. ಈ 125 ವಿಮಾನ ನಿಲ್ದಾಣಗಳ ಪೈಕಿ ಅಜಂಗಢ, ಅಲಿಗಢ, ಚಿತ್ರಕೂಟ್, ಗೊಂಡಿಯಾ, ಜಲ್ಗಾಂವ್, ಮೊರಾದಾಬಾದ್ ಮತ್ತು ಪಿಥೋರಗಢ ವಿಮಾನ ನಿಲ್ದಾಣಗಳು ನಿಗದಿತ ವಿಮಾನಯಾನ ಸಂಸ್ಥೆಗಳು ಪ್ರಸ್ತಾಪಿಸಿದ ಹೊಸ ವಿಮಾನ ನಿಲ್ದಾಣಗಳಾಗಿವೆ." ಎಂದು ಡಿಜಿಸಿಎ ತಿಳಿಸಿದೆ.
ಪೈಲಟ್ ಡ್ಯೂಟಿ ಮಾನದಂಡ ಜಾರಿ ಅವಧಿ ವಿಸ್ತರಣೆ ಇಲ್ಲ: ಪೈಲಟ್ಗಳಿಗೆ ಪರಿಷ್ಕೃತ ಫ್ಲೈಟ್ ಡ್ಯೂಟಿ ಮಾನದಂಡಗಳನ್ನು ಜಾರಿಗೆ ತರುವ ಜೂನ್ 1 ರ ಗಡುವನ್ನು ವಿಸ್ತರಿಸದಿರಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ನಿರ್ಧರಿಸಿದೆ ಮತ್ತು ಪರಿಷ್ಕೃತ ಯೋಜನೆಗಳ ವಿವರಗಳನ್ನು ಏಪ್ರಿಲ್ 15 ರೊಳಗೆ ಸಲ್ಲಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಅದು ಸೂಚಿಸಿದೆ. ಜೂನ್ 1 ರಿಂದ ಜಾರಿಗೆ ಬರಲಿರುವ ಹೊಸ ನಿಯಮಗಳು ಪೈಲಟ್ಗಳಿಗೆ ವಿಶ್ರಾಂತಿಯ ಸಮಯ ನಿಗದಿಪಡಿಸಲು ಮತ್ತು ಪೈಲಟ್ಗಳ ಆಯಾಸವನ್ನು ನಿವಾರಿಸುವ ಉದ್ದೇಶ ಹೊಂದಿವೆ.
ಏರ್ ಇಂಡಿಯಾ, ಸ್ಪೈಸ್ ಜೆಟ್ ಮತ್ತು ಇಂಡಿಗೊಗಳನ್ನು ಒಳಗೊಂಡಿರುವ ಫೆಡರೇಶನ್ ಆಫ್ ಇಂಡಿಯನ್ ಏರ್ ಲೈನ್ಸ್ (ಎಫ್ಐಎ) ಜನವರಿ 8 ರಂದು ಹೊರಡಿಸಿದ ಪರಿಷ್ಕೃತ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ಸ್ (ಎಫ್ ಡಿಟಿಎಲ್) ಮಾನದಂಡಗಳನ್ನು ಜಾರಿಗೆ ತರಲು ಹೆಚ್ಚಿನ ಸಮಯ ಕೋರಿ ನಿಯಂತ್ರಕರಿಗೆ ಡಿಜಿಸಿಎಗೆ ಕನಿಷ್ಠ ಎರಡು ಬಾರಿ ಪತ್ರ ಬರೆದಿದೆ.
ಇದನ್ನೂ ಓದಿ : ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ: 10 ಗ್ರಾಂಗೆ ಎಷ್ಟು ಗೊತ್ತೇ? - Gold Prices Soar