ನವದೆಹಲಿ:ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ತೈಲ ಖರೀದಿಸುವುದನ್ನು ಮುಂದುವರೆಸಿದ ಕೇಂದ್ರ ಸರ್ಕಾರದ ಕ್ರಮದಿಂದ 2022- 23ರ ಹಣಕಾಸು ವರ್ಷದ ಮೊದಲ 11 ತಿಂಗಳಲ್ಲಿ ದೇಶದ ತೈಲ ಆಮದು ಬಿಲ್ನಲ್ಲಿ ಸುಮಾರು 7.9 ಬಿಲಿಯನ್ ಡಾಲರ್ ಉಳಿತಾಯವಾಗಿದೆ ಮತ್ತು ಚಾಲ್ತಿ ಖಾತೆ ಕೊರತೆಯನ್ನು ಕಡಿಮೆ ಮಾಡಲು ಈ ಕ್ರಮ ದೇಶಕ್ಕೆ ಸಹಾಯ ಮಾಡಿದೆ.
ರಷ್ಯಾದ ವಿರುದ್ಧ ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಷ್ಯಾದೊಂದಿಗಿನ ಸಂಬಂಧವನ್ನು ಕಾಪಾಡಿಕೊಳ್ಳಲು ದೃಢವಾಗಿ ನಿರ್ಧರಿಸಿದೆ. ಒಂದು ತಿಂಗಳ ಹಿಂದೆ ಇರಾಕ್ ಮತ್ತು ಸೌದಿ ಅರೇಬಿಯಾಗಳಿಂದ ಆಮದು ಮಾಡಿಕೊಳ್ಳಲಾದ ಕಚ್ಚಾ ತೈಲಕ್ಕಿಂತ ಹೆಚ್ಚು ಪ್ರಮಾಣದ ತೈಲವನ್ನು ಭಾರತ ಈ ವರ್ಷದ ಏಪ್ರಿಲ್ನಲ್ಲಿ ರಷ್ಯಾದಿಂದ ಆಮದು ಮಾಡಿಕೊಂಡಿದೆ ಎಂದು ವ್ಯಾಪಾರ ಟ್ರ್ಯಾಕಿಂಗ್ ಏಜೆನ್ಸಿಗಳಾದ ಕೆಪ್ಲರ್ ಮತ್ತು ಎಲ್ಎಸ್ಇಜಿ ಸಂಗ್ರಹಿಸಿದ ಅಂಕಿ - ಅಂಶಗಳು ತಿಳಿಸಿವೆ.
ಏಪ್ರಿಲ್ನಲ್ಲಿ ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಕಚ್ಚಾ ತೈಲದ ಪ್ರಮಾಣವು ಶೇಕಡಾ 13 ರಿಂದ 17 ರಷ್ಟು ಹೆಚ್ಚಾಗಿದೆ. ಏಪ್ರಿಲ್ನಲ್ಲಿ ರಷ್ಯಾ ಭಾರತದ ಅಗ್ರ ತೈಲ ಪೂರೈಕೆದಾರನಾಗಿ ಮುಂದುವರೆದಿದ್ದು, ಇರಾಕ್ ಮತ್ತು ಸೌದಿ ಅರೇಬಿಯಾ ನಂತರದ ಸ್ಥಾನಗಳಲ್ಲಿವೆ. ಇರಾಕ್ನಿಂದ ಆಮದು ಮಾಡಿಕೊಳ್ಳಲಾದ ಕಚ್ಚಾ ತೈಲದ ಪ್ರಮಾಣ ಶೇಕಡಾ 20 ರಿಂದ 23 ರಷ್ಟು ಕುಸಿದಿದೆ ಎಂದು ಅಂಕಿ - ಅಂಶಗಳಿಂದ ತಿಳಿದು ಬಂದಿದೆ.
ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತವು ರಷ್ಯಾದಿಂದ ಹೆಚ್ಚಿನ ತೈಲ ಆಮದು ಮಾಡಿಕೊಳ್ಳುತ್ತಿರುವುದರಿಂದ ವಿಶ್ವ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಸಮಂಜಸವಾದ ಮಟ್ಟದಲ್ಲಿರಲು ಕೂಡ ಸಹಾಯವಾಗಿದೆ. ಹೀಗಾಗಿ ಇದು ಇತರ ತೈಲ ಆಮದು ರಾಷ್ಟ್ರಗಳಿಗೆ ಪ್ರಯೋಜನ ತಂದಿದೆ.