ನವದೆಹಲಿ: 2014ಕ್ಕೆ ಹೋಲಿಸಿದರೆ 2024 ರ ಆದಾಯ ತೆರಿಗೆ ಮೌಲ್ಯಮಾಪನ ವರ್ಷ (ಎವೈ)ದಲ್ಲಿ ಭಾರತದಲ್ಲಿ ಕೋಟ್ಯಧಿಪತಿ ತೆರಿಗೆದಾರರ ಸಂಖ್ಯೆ ಐದು ಪಟ್ಟು ಏರಿಕೆಯಾಗಿ 2.2 ಲಕ್ಷಕ್ಕೆ ಹೆಚ್ಚಳವಾಗಿದೆ ಎಂದು ಹೊಸ ವರದಿಯೊಂದು ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಆರ್ಥಿಕ ವಿಭಾಗದ ಸಂಶೋಧನಾ ವರದಿಯ ಪ್ರಕಾರ, ಕಳೆದ 10 ಮೌಲ್ಯಮಾಪನ ವರ್ಷಗಳಲ್ಲಿ ಒಟ್ಟು ತೆರಿಗೆದಾರರ ಸಂಖ್ಯೆ 2.3 ಪಟ್ಟು ಏರಿಕೆಯಾಗಿ 8.62 ಕೋಟಿಗೆ ತಲುಪಿದ್ದು, 10 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗುಂಪಿನ ತೆರಿಗೆದಾರರ ಸಂಖ್ಯೆ ಗಮನಾರ್ಹ ಹೆಚ್ಚಳವಾಗಿದೆ.
ಭಾರತದಲ್ಲಿ ಮಧ್ಯಮ ವರ್ಗದ ಆದಾಯ ಶ್ರೇಣಿಯು 2014 ರಲ್ಲಿ ಇದ್ದ 1.5 - 5 ಲಕ್ಷ ರೂ.ಗಳಿಂದ 2024 ರಲ್ಲಿ 2.5 - 10 ಲಕ್ಷ ರೂ.ಗೆ ಬದಲಾಗಿದೆ ಎಂದು ಗ್ರಾನ್ಯುಲರ್ ವಿಶ್ಲೇಷಣೆ ಹೇಳಿದೆ. 2024ರಲ್ಲಿ ಸಲ್ಲಿಕೆಯಾದ ಒಟ್ಟು ಆದಾಯ ತೆರಿಗೆ ರಿಟರ್ನ್ಸ್ 7.3 ಕೋಟಿಯಿಂದ 8.6 ಕೋಟಿಗೆ ಏರಿಕೆಯಾಗಿದೆ. ಈ ಪೈಕಿ ಒಟ್ಟು 6.89 ಕೋಟಿ ಅಥವಾ ಶೇಕಡಾ 79 ರಷ್ಟು ರಿಟರ್ನ್ಸ್ ನಿಗದಿತ ದಿನಾಂಕದಂದು ಅಥವಾ ಅದಕ್ಕೂ ಮೊದಲು ಸಲ್ಲಿಕೆಯಾಗಿವೆ.
2025ರ ಮೌಲ್ಯಮಾಪನ ವರ್ಷದಲ್ಲಿ 7.3 ಕೋಟಿ ಐಟಿಆರ್ಗಳನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಲಾಗಿದ್ದು, ಮಾರ್ಚ್ 2025 ರವರೆಗೆ ಉಳಿದ ಹಣಕಾಸು ವರ್ಷದಲ್ಲಿ ಇನ್ನೂ 2.0 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಮೌಲ್ಯಮಾಪನ ವರ್ಷ 2025 ರಲ್ಲಿ, ನಿಗದಿತ ದಿನಾಂಕದ ನಂತರ ಸಲ್ಲಿಕೆಯಾಗುವ ಐಟಿ ರಿಟರ್ನ್ಗಳ ಪಾಲು ಸುಮಾರು 18-19 ಪ್ರತಿಶತಕ್ಕೆ ಇಳಿಯಬಹುದು.